ಗುಣವಂತೆಯಲ್ಲಿ ಮಾರ್ಚ್‌ 16 ರಿಂದ ರಾಷ್ಟ್ರೀಯ ನಾಟ್ಯೋತ್ಸವ

dance festival press meet
Published on

ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಕೆರೆಮನೆಯ ಆಶ್ರಯದಲ್ಲಿ 14ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಮಾರ್ಚ್ 16ರಿಂದ 20ರ ವರೆಗೆ ನಡೆಯಲಿದೆ ಎಂದು ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾ. 16 ರಂದು ಸಂಜೆ 4-30 ಗಂಟೆಗೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಶತಾವಧಾನಿ ಡಾ. ಆರ್. ಗಣೇಶ ಬೆಂಗಳೂರು ಇವರಿಗೆ ಪ್ರಸಕ್ತ ವರ್ಷದ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಅತಿಥಿಗಳಾಗಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ, ಪೋಕ್ ಲ್ಯಾಂಮಡ್‌ನ ಡಾ. ಜಯರಾಜ್, ಉಪೇಂದ್ರ ಪೈ, ಡಾ. ಸಂಜಯ ಮೈಸೂರು ಪಾಲ್ಗೊಳ್ಳುವರು.
ಮಾ. 17 ರಂದು ಸಂಜೆ 4-30 ಗಂಟೆಗೆ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಡಾ. ಧರಣಿದೇವಿ, ಕೃಷ್ಣಮೂರ್ತಿ ಮಂಜರು, ವೆಂಕಟ್ರಮಣ ಹೆಗಡೆ ಕವಲಕ್ಕಿ, ಡಾ. ನಾರಾಯಣ ಹೆಗಡೆ ಮೈಸೂರು, ಗಣಪಯ್ಯ ಗೌಡ ಮುಗಳಿ ಪಾಲ್ಗೊಳ್ಳುವರು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಎಂ.ಎಲ್.ಸಾಮಗ ಮಲ್ಪೆ ಇವರಿಗೆ ಘೋಷಣೆ ಮಾಡಲಾಗಿದ್ದು ಮಾರ್ಚ್ 17ರಂದು ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ರಾಜ್ಯಗಳಿಂದ ಕಲಾತಂಡಗಳು ಭಾಗವಹಿಸಲಿವೆ. ಶಾಲಾ ಮಕ್ಕಳಿಗಾಗಿ ತುಮರಿಯ ತಂಡದಿಂದ ಅನ್ಯಾಳ ಡೈರಿ ನಾಟಕ ಪ್ರದರ್ಶನ ನಡೆಯಲಿದೆ. ಕಲಾ ಗಂಗೋತ್ರಿಯವರಿAದ ನಡೆಯುವ ನಾಟಕ ಪ್ರದರ್ಶನದಲ್ಲಿ ಮುಖ್ಯ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಲ್.ಎಂ.ಹೆಗಡೆ, ಕೆ.ಜಿ.ಹೆಗಡೆ, ರಾಜೇಶ್ವರೀ ಹೆಗಡೆ ಕೆರೆಮನೆ, ಶ್ರೀಧರ ಹೆಗಡೆ ಕೆರೆಮನೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net