19ರಿಂದ ನಗರದಲ್ಲಿ ರಾಷ್ಟ್ರೀಯ ನೃತ್ಯೋತ್ಸವ: ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಮಾಹಿತಿ

PM
Published on

ಮಂಡ್ಯ: ಗುರುದೇವ ಲಲಿತಕಲಾ ಅಕಾಡೆಮಿಯ ರಜತೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಆ.19 ರಿಂದ 21ರ ವರೆಗೆ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಮಂದಿರದಲ್ಲಿ ಗುರುದೇವೋತ್ಸವ-2022 ರಾಷ್ಟ್ರೀಯ ನೃತ್ಯೋತ್ಸವ ಮತ್ತು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಹೇಳಿದರು.
19ರಂದು ಸಂಜೆ 4.30ಕ್ಕೆ ಸಮಾರಂಭವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು, ಮನೋವೈದ್ಯ ಡಾ.ಟಿ.ಎನ್.ಸತ್ಯನಾರಾಯಣರಾವ್, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಕೆ.ರವೀಂದ್ರನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಗುರುದೇವ ಲಲಿತಕಲಾ ಅಕಾಡೆಮಿ ಕಲಾ ನಿರ್ದೇಶಕ ಡಾ.ಚೇತನಾ ರಾಧಾಕೃಷ್ಣ ಭಾಗವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯ ಡಾ.ಬಿ.ಎಸ್.ಕಕ್ಕಿಲಾಯ, ಕಥಕ್ ಕಲಾವಿದರಾದ ಹರಿ ಮತ್ತು ಚೇತನ, ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ ಅವರಿಗೆ 2019-20ನೇ ಸಾಲಿನ ಗುರುದೇವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. 20ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ರಾಷ್ಟ್ರೀಯ ನೃತ್ಯ ಸ್ಪರ್ಧೆ ನಡೆಯಲಿದ್ದು, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಆಗಮಿಕ ವಿದ್ವಾನ್ ಎಸ್.ಟಿ. ಶಂಕರಾನಂದ ಜೋಯಿಸ್, ಉದ್ಯಮಿ ಜಗನ್ನಾಥಶೆಟ್ಟಿ, ಜಾನಪದ ಕಲಾವಿದ ಕೆ.ಎಂ.ಕೃಷ್ಣೇಗೌಡ ಅವರಿಗೆ 2020-21ನೇ ಸಾಲಿನ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
21ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಗುರುದೇವ ಪ್ರಶಸ್ತಿ ಪ್ರದಾನ, ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆ ವಹಿಲಿಸದ್ದಾರೆ. ಮೈಸೂರೂ ಮಾಯಕಾರ ಗುರುಕುಲ ಸಂಸ್ಥಾಪಕ ಡಾ. ಮೂಗೂರು ಮಧುದೀಕ್ಷಿತ್ ಗುರೂಜಿ, ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ, ಮೈಸೂರು ಜೆಎಸ್‌ಎಸ್ ಸ್ನಾತಕೋತ್ತರ ಸಮಾಜ ಕಾರ್ಯವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕುಮುದಿನಿ ಅಚ್ಚಿ, ಲಯನ್ ಜಿಲ್ಲಾ ರಾಜ್ಯಪಾಲ ಸಂಯೋಜನೆ ಅಧಿಕಾರಿ ಬಿ.ಎಂ. ಅಪ್ಪಾಜಪ್ಪ ಅವರಿಗೆ 2021-22ನೇ ಸಾಲಿನ ಗುರುದೇವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು. ಕಲಾನಿರ್ದೇಶಕಿ ಡಾ.ಪಿ.ಎಂ.ಚೇತನಾ ರಾಧಾಕೃಷಂ, ಎಂ.ಎಲ್.ರಾಜನ್, ವಿದ್ಯಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net