ಜನರಿಗೆ ಮೋಸವಾಗಿದ್ದರೆ ದೂರು ದಾಖಲಿಸಿ: ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎಸ್.ವಸಂತ್‌ಕುಮಾರ್ ಸಲಹೆ

National Consumer Day Mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಜತೆಗೆ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಇದರಲ್ಲಿ ಗ್ರಾಹಕರು ಮೋಸ ಹೋದಲ್ಲಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲು ಮಾಡಿ ತಮಗಾದ ನಷ್ಟಕ್ಕೆ ಪರಿಹಾರ ಪಡೆಯಬಹುದು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎಸ್.ವಸಂತ್‌ಕುಮಾರ್ ತಿಳಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಾ ಶಾಸ್ತ್ರ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ಡಿಜಿಟಲ್ ಆರ್ಥಿಕತೆ ತುಂಬ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಆನ್‌ಲೈನ್ ಸರ್ವೀಸ್ ಪಡೆಯಬಹುದಾಗಿತ್ತು. ತಮಗೆ ಬೇಕಾದ ಆಹಾರ, ಔಷಧ ಸೇರಿದಂತೆ ಇತರೆ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಲಾಗುತ್ತಿತ್ತು. ಇದರಲ್ಲಿ ಕೆಲವು ವಂಚನೆ ಪ್ರಕರಣಗಳೂ ನಡೆದಿವೆ. ಆದರೆ ಕೆಲವು ಮಾತ್ರ ಬೆಳಕಿಗೆ ಬಂದರೆ ಮತ್ತೆ ಕೆಲವು ಮುಚ್ಚಿಹೋಗಿರುತ್ತವೆ. ಯಾವುದೇ ವಸ್ತುಗಳನ್ನು ಎಂಆರ್‌ಪಿಗಿಂತ ಹೆಚ್ಚಿನ ಹಣಕ್ಕೆ ಹಾಗೂ ಅವಧಿ ಮುಗಿದ ವಸ್ತುಗಳನ್ನು ಮಾರಾಟ ಮಾಡಿದ್ದರೆ ಅಂತಹವರ ವಿರುದ್ಧವೂ ಪರಿಹಾರವನ್ನು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಗ್ರಾಹಕರ ಆಯೋಗದ ಸದಸ್ಯೆ ಎಂ.ಎಲ್.ಲತಾ ಮಾತನಾಡಿ, 2019ರ ನಂತರ ಇದ್ದ ಕಾನೂನಿಗೆ ತಿದ್ದುಪಡಿಯಾಗಿದೆ. ಇದರಲ್ಲಿ ಖರೀದಿದಾರರು ಮತ್ತು ಮಾರಾಟಗಾರರೂ ಇಬ್ಬರೂ ಬಾಧ್ಯಸ್ಥರಾಗಿರುತ್ತಾರೆ. ತಪ್ಪು ಯಾರೇ ಮಾಡಿದ್ದರೂ ಅವರು ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸೇವೆ ಅಥವಾ ಖರೀದಿ, ಮಾರಾಟದಲ್ಲಿ ಮೋಸ ವಂಚನೆಯಾಗಿದ್ದರೆ ಅಂತಹವರು ನೇರವಾಗಿ ಗ್ರಾಹಕರ ವೇದಿಕೆಯ ಕಚೇರಿಗೆ ಧಾವಿಸಿ ಮೊಕದ್ದಮೆ ದಾಖಲು ಮಾಡಬಹುದು. ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ 50 ಲಕ್ಷ ರೂವರೆಗೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಿಂತಲೂ ಹೆಚ್ಚಿದ್ದರೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅರ್ಜಿ ಸಲ್ಲಿಸಿ ಹೆಚ್ಚಿನ ಪರಿಹಾರ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಸರಳ ನಾಯರ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಶ್ರೀನಿವಾಸ್, ವ್ಯವಸ್ಥಾಪಕಿ ರೇಣುಕಾ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಕೆ.ಪದ್ಮನಾಭ, ಸಂಯೋಜಕಿ ಎನ್.ಪಿ.ಶಿಲ್ಪಾ, ಸಹಾಯಕ ಪ್ರಾಧ್ಯಾಪಕರಾದ ಡಾ.ಆಶಾ, ಡಾ.ಲತಾ, ಪ್ರೊ.ಜಯಶೀಲಾ, ಅಂಥೋಣಿ ಸ್ಯಾಮ್‌ಸನ್ ಇತರರಿದ್ದರು.

ಇದೇ ವೇಳೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ರಕ್ಷಣೆ ವಿಷಯದ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net