

ಉಡುಪಿ: 21ನೇ ಶತಮಾನದ ಯಾಂತ್ರಿಕ ಯುಗದಲ್ಲಿದ್ದು, ಅನುಕೂಲಗಳೊಂದಿಗೆ ಅಪಾಯವನ್ನೂ ಎದುರಿಸುವಂತಾಗಿದೆ. ಇಂತಹ ಸಂದರ್ಭ ಗ್ರಾಹಕರ ಹಕ್ಕು ಹಾಗೂ ಹಿತ ಕಾಯುವಲ್ಲಿ ತೊಡಗಿಕೊಳ್ಳುವ ಗ್ರಾಹಕರ ವೇದಿಕೆ ಕಾರ್ಯ ಅನನ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಶ್ಲಾಘಿಸಿದರು.
ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕ ದಿಕ್ಕು ತಪ್ಪುತ್ತಾನೆ ಅಥವಾ ದಿಕ್ಕು ತಪ್ಪಿಸಲಾಗುತ್ತದೆ. ಹೀಗಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ವಸ್ತು ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಜಾಗರೂಕರಾಗಿರಬೇಕು ಎಂದರು.
ಗ್ರಾಹಕರ ವೇದಿಕೆಯ ಮಾಜಿ ಸಂಚಾಲಕ ಎ.ಪಿ. ಕೊಡಂಚ, "ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರ ಯುಗದಲ್ಲಿ ಗ್ರಾಹಕರ ರಕ್ಷಣೆ' ಕುರಿತು ಉಪನ್ಯಾಸ ನೀಡಿದರು. ಬಳಕೆದಾರರ ವೇದಿಕೆ ಸಂಚಾಲಕ ಯು.ಜಿ. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಭಾರ ಉಪನಿರ್ದೇಶಕ ರವೀಂದ್ರ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಶ್ರೀನಿವಾಸ ಉಪಾಧ್ಯ, ಸುಜಾತಾ ಕೊರಳ್ಳಿ, ಬಳಕೆದಾರರ ವೇದಿಕೆಯ ಉಪಸಂಚಾಲಕ ಪ್ರೊ. ನಾರಾಯಣ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿದ್ಯಾ ಪ್ರಾರ್ಥಿಸಿದರು. ಟ್ರಸ್ಟಿ ಹರಿಕೃಷ್ಣ ಶಿವತ್ತಾಯ ನಿರೂಪಿಸಿದರು.ಲಕ್ಮೀಬಾಯಿ ವಂದಿಸಿದರು.