

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ೨೫ ಮತ್ತು ೨೬ ರಂದು ಜೀವವೈವಿದ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ತಗ್ಗಿಸುವಿಕೆ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ತಿಳಿಸಿದರು.
ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳು ವೈಜ್ಞಾನಿಕ ಸಂಸ್ಥೆಗಳು ಮತ್ತು ಜೀವವೈವಿದ್ಯತೆಯ ಕುರಿತು ಸಂಶೋಧನೆ, ಶಿಕ್ಷಣದಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಜೀವವೈವಿದ್ಯತೆ ಪ್ರಸ್ತುತ ಸ್ಥಿತಿ, ಅಪಾಯಗಳು ಹಾಗೂ ಸಂರಕ್ಷಣೆ, ಜೈವಿಕ ಪರಿಶೋಧನೆ ಮತು ಜೈವಿಕ ಸಂಪನ್ಮೂಲಗಳ ಸುಸ್ತಿರ ಬಳಕೆ, ಹವಾಮಾನ ಬದಲಾವಣೆ ಪ್ರಸ್ತುತ ಸ್ಥಿತಿ ವತ್ತು ಭವಿಷ್ಯದ ಸವಾಲುಗಳು, ಹವಾಮಾನ ಬದಲಾವಣೆ ಎದುರಿಸಲು ಪರ್ಯಾಯ ಶಕ್ತಿ ಮೂಲಗಳು ಕುರಿತು ಪ್ರಬಂಧ ಮಂಡನೆ, ವಿಚಾರ ವಿನಿಮಯ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಒಟ್ಟು ೧೦೦ಕ್ಕೂ ಅಧಿಕ ವಿಜ್ಞಾನಿಗಳು ಪಾಲ್ಗೊಂಡು, ವಿವಿಧ ವಿಷಯಗಳ ಒಟ್ಟು ೧೨೩ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪಾರಿಸರಿಕ ವಿಷಯದಲ್ಲಿ ನುರಿತ ೧೦ ತಜ್ಞರು ಸಂಬಂದಿಸಿದ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಮಾ.೨೫ರಂದು ಬೆಳಗ್ಗೆ ೯.೩೦ ಗಂಟೆಗೆ ನಡೆಯುವ ಸಮ್ಮೇಳನವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಆರ್.ಸಿ.ಜಗದೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಸದಸ್ಯ ಕಾರ್ಯದರ್ಶಿ ಎನ್.ಎಸ್.ಲಿಂಗರಾಜ್ ಭಾಗವಹಿಸಲಿದ್ದಾರೆ. ಸಮ್ಮೇಳನದ ಪ್ರಬಂಧ ಸಾರಾಂಶದ ಪುಸ್ತಕವನ್ನು ಕರ್ನಾಟಕ ರಾಜ್ಯ ವಿಜ್ಞಾನ ವತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಡಾ.ಯು.ಟಿ.ವಿಜಯ್ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಬಿ.ಬಿ.ಎಂ.ಪಿ. ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಪ್ರಮುಖರಾದ ಡಾ.ಬಿ.ಹೇಮಳಾ ನಾಯಕ್, ಡಾ.ಕೆ.ಸಿ.ಶಶಿಧರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವವರಿಸಿದರು.
ಸಮ್ಮೇಳನದ ಸಮಾರೋಪ ಸಮಾರಂಭ ಮಾ.೨೬ರಂದು ಸಂಜೆ ೪.೩೦ ಗಂಟೆಗೆ ನಡೆಯಲಿದ್ದು, ನೂತನವಾಗಿ ಸ್ಥಾಪಿತವಾಗಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಷೇಶಾಧಿಕಾರಿ ಡಾ.ಕೆ.ಎಮ್.ಹರಿಣಿಕುಮಾರ್, ಉಪಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಬಾಲಚಂದ್ರ, ಟಾಟಾ ಕಾಫಿ ಲಿಮಿಟೆಡ್ ಪಾಲಿಬೆಟ್ಟ ಜನರಲ್ ಮ್ಯಾನೇಜರ್ ಬಿ.ಜಿ.ಪೊನ್ನಪ್ಪ, ವಿಶ್ವವಿದ್ಯಾಲಯದ ಅಧಿಕಾರಿ ಡಾ.ಡಿ.ಸುರೇಶ್, ಪ್ರಮುಖರಾದ ಡಾ.ವಿ.ಶ್ರೀನಿವಾಸ್, ಡಾ.ಡಿ.ತಿಪ್ಪೇಶ್, ಡಾ.ಬಿ.ಸಿ.ಧನಂಜಯ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.