ರಾಷ್ಟ್ರೀಯ ಸಮ್ಮೇಳನ ನಾಳೆ

12 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಯಾಪುರದ ಎಸ್​ಜೆಎಂವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಉನ್ನತ ಶಿಕ್ಷಣದಲ್ಲಿ ಡಿಜಿಟಲ್​ ಕ್ರಾಂತಿ- ವಿಕಸಿತ ಬೋಧನೆ ಮತ್ತು ಕಲಿಕೆಯಲ್ಲಿ ಬದಲಾದ ಬೋಧನಾ ಪದ್ಧತಿ ಕುರಿತು ಬಹು ಶಿಸ್ತೀಯ ರಾಷ್ಟ್ರೀಯ ಸಮ್ಮೇಳನವನ್ನು ಮೇ 14ರಂದು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಚಾರ್ಯ ಡಾ. ರಾಜಶೇಖರಪ್ಪ ಎಂ. ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಚಿತ್ರದುರ್ಗದ ಎಸ್​ಜೆಎಂವಿಯ ಶ್ರೀ ಜಗದ್ಗುರು ಮುರುರಾಜೇಂದ್ರ ಮಠದ ಅಧ್ಯಕ್ಷ ಶಿವಯೋಗಿ ಕಳಸದ ಹಾಗೂ ಡಾ. ಬಸವಕುಮಾರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕವಿವಿ ಕುಲಪತಿ ಡಾ. ಜಯಶ್ರೀ ಎಸ್​., ಪತ್ರಕರ್ತ ರವಿ ಹೆಗಡೆ ಆಗಮಿಸುವರು ಎಂದರು.

ನಂತರ ನಡೆಯುವ ಗೋಷ್ಠಿಗಳಲ್ಲಿ ಉನ್ನತ ಶಿಕ್ಷಣದಲ್ಲಿ ಡಿಜಿಟಲ್​ ಕ್ರಾಂತಿ ಕುರಿತು ಡಾ. ಸಂಜಯ ಮಾಲಗತ್ತಿ ಹಾಗೂ ಭವಿಷ್ಯದ ಜನಾಂಗಕ್ಕೆ ಡಿಜಿಟಲ್​ ಕೌಲಗಳು ಕುರಿತು ಪತ್ರಕರ್ತ ಬಸವರಾಜ ಹೊಂಗಲ ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಡಾ. ಎಸ್​.ಎಸ್​. ಚಂದ್ರಶೇಖರ, ಡಾ. ಪಿ.ಎಸ್​. ಶಂಕರ ಆಗಮಿಸುವರು. ಡಾ. ಚೈತ್ರಾ ನಾಯಕ ಸಮಾರೋಪ ನುಡಿಗಳನ್ನಾಡುವರು. ಡಾ. ರಾಜಶೇಖರಪ್ಪ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜಯಶ್ರೀ ಯಂಡಿಗೇರಿ ಮಾತನಾಡಿ, ಸಮ್ಮೇಳನದಲ್ಲಿ ಡಿಜಿಟಲ್​ ಜಗತ್ತಿನಲ್ಲಿ ಕೃತಕ ಬುದ್ಧಿ ಮತ್ತೆಯ ಪಾತ್ರ, ಭಾಷೆ, ಸಾಹಿತ್ಯ, ಸಮಾಜ ವಿಜ್ಞಾನಗಳ ಮೇಲೆ ಆಧುನಿಕ ತಂತ್ರಜ್ಞಾನದ ಪ್ರಭಾವ, ಭವಿಷ್ಯದ ತಲೆಮಾರಿಗೆ ಡಿಜಿಟಲ್​ ತಂತ್ರಜ್ಞಾನ ಸೇರಿ ವಿವಿಧ ವಿಷಯಗಳ ಕುರಿತು 30ಕ್ಕೂ ಹೆಚ್ಚು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಇಂದಿನ ಯುವ ಜನಾಂಗ ಆಧುನಿಕ ತಂತ್ರಜ್ಞಾನದತ್ತ ಮುಖ ಮಾಡಿರುವ ನಿಟ್ಟಿನಲ್ಲಿ ಅವರಲ್ಲಿ ಸೃಜನಾತ್ಮಕತೆ ಹೆಚ್ಚಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಛಾಯಾ ಹುಬ್ಬಳ್ಳಿ, ಪುಷ್ಪಾ ಬಸನಗೌಡರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net