ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧದ ತಿಳಿವಳಿಕೆ: ಡಾ.ಎಚ್.ಬಿ.ಪ್ರಕಾಶ್ ಸಲಹೆ

New Project (7)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಆರೋಗ್ಯವೃತ್ತಿಪರರಾಗಿ ನಾವು ಈ ಎಲ್ಲ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧದ ಸಮಗ್ರ ಜ್ಞಾನ ಪಡೆದು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತುಮಕೂರು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಪ್ರಕಾಶ್ ಹೇಳಿದರು.

ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವತಿಯಿಂದ ವಿದ್ಯಾಗಿರಿಯಲ್ಲಿ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್-ಗ್ಲೋಬಲ್ ಥ್ರೆಟ್ಸ್, ಲೋಕಲ್ ಆಕ್ಷನ್ಸ್, ಒನ್ ಹೆಲ್ತ್ ಸೊಲ್ಯೂಷನ್ಸ್(ಎಎಂಆರ್-ಜಿಎಲ್‌ಒಎಚ್) ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎಂಬುವುದು ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಪರೋಪಜೀವಿ ಮೊದಲಾದ ಸೂಕ್ಷ್ಮಾಣುಗಳು ಔಷಧಗಳಿಗೆ ಪ್ರತಿರೋಧವನ್ನು ತೋರಿಸುವ ಸಾಮರ್ಥ್ಯ ಹೊಂದಿರುವ ಸ್ಥಿತಿ. 2011ರಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯು ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಇಂದು ಆಳ್ವಾಸ್ ಸಂಸ್ಥೆಯು ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧದ ಕುರಿತು ಹೆಚ್ಚಿನ ಜ್ಞಾನ ನೀಡುವ ಸಲುವಾಗಿ ಈ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ಸೂಚಿಸಿದರು.

ಡಿಜಿಟಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಎಎಂಆರ್ ಸೆಲ್‌ನ ನೋಡಲ್ ಅಧಿಕಾರಿ ಡಾ.ಉಮಾ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ, ಅಮೆರಿಕದ ಸಂಶೋಧನಾ ವಿಶ್ಲೇಷಕ ಡಾ. ಶಿವಾನಂದ್ ಸಾವಟಗಿ, ನವದೆಹಲಿಯ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ(ಪಥ್)ಡಾ.ತಿಕೇಶ್ ಬಿಸನ್, ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಡೊಲಾತ್ಸಿನ್ ಝಲಾ, ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಹಪ್ರಾಧ್ಯಾಪಕಿ ಡಾ.ರೂಪಾ ಎಸ್.ಭಂಡಾರಿ, ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ಸಹಪ್ರಾಧ್ಯಾಪಕಿ ನಿಕ್ಕಿ ಎನ್.ಎಂ. ವಿವಿಧ ವಿಷಯಗಳಲ್ಲಿ ಗೋಷ್ಠಿ ನಡೆಸಿಕೊಟ್ಟರು.

ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಯತಿಕುಮಾರಸ್ವಾಮಿ ಗೌಡ, ಸಂಘಟನಾ ಕಾರ್ಯದರ್ಶಿ ಪ್ರೊ.ಕವಿತಾ ಡಿಸಿಲ್ವಾ ಉಪಸ್ಥಿತರಿದ್ದರು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹಪ್ರಾಧ್ಯಾಪಕಿ ನಿಕ್ಕಿ ಎನ್.ಎಂ. ನಿರೂಪಿಸಿದರು. ಉಪಪ್ರಾಂಶುಪಾಲೆ ಪ್ರೊ.ರೇಣುಕಾ ಭಂಡಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net