

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬೆಳವಣಿಗೆಗಳ ನಡುವೆ ವಿನೂತನವಾಗಿ ಆಲೋಚಿಸುವ ಸಾಮರ್ಥ್ಯ ಹೊಸ ಬಗೆಯ ಔದ್ಯೋಗಿಕ ಅವಕಾಶ ಪಡೆಯಲು ನೆರವಾಗುತ್ತದೆ ಎಂದು ಮಂಗಳೂರಿನ ಎ.ಜೆ.ತಾಂತ್ರಿಕ ಮಹಾವಿದ್ಯಾಲಯ ಎಂ.ಬಿ.ಎ ವಿಭಾಗ ಮುಖ್ಯಸ್ಥ ಡಾ.ಶರಣ್ ಕುಮಾರ್ ಶೆಟ್ಟಿ ಹೇಳಿದರು.
ಮಂಗಳವಾರ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಶಾಸ್ತ್ರ ಅಧ್ಯಯನ, ಸಂಶೋಧನೆ ವಿಭಾಗ ಸುಸ್ಥಿರ ಬೆಳವಣಿಗೆಗೆ ವಿವಿಧ ಕಾರ್ಯತಂತ್ರಗಳ ಕುರಿತ ಎಕ್ಸ್‌ಪ್ಯಾಂಡಿಂಗ್ ಹಾರಿಜನ್ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹೊಸ ಆಲೋಚನೆ, ವಿಶೇಷ ರೀತಿಯ ಕೆಲಸಗಳಿಂದ ಗುರುತಿಸಿಕೊಳ್ಳಬೇಕು. ಕ್ರಿಯಾಶೀಲ ಗುರುತಿಸಿಕೊಳ್ಳುವಿಕೆಯಿಂದ ಔದ್ಯೋಗಿಕ ಅವಕಾಶಗಳ ಬಾಗಿಲು ತೆರೆಯುತ್ತದೆ. ತಂತ್ರಜ್ಞಾನದ ಅವಲಂಬನೆ ಹೆಚ್ಚಾದಾಗ ಆತಂಕ ಪಡುವ ಅನಿವಾರ್ಯತೆ ಎದುರಾಗುವುದಿಲ್ಲ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನಾಭಿವೃದ್ಧಿ ಸಾಧ್ಯ ಎಂದರು.
ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ಪ್ರಿಯಾಕುಮಾರಿ ಎಸ್.ವಿ., ಉಜಿರೆ ಎಸ್‌ಡಿಎಂ ಕಾಲೇಜು ವಾಣಿಜ್ಯ ನಿಕಾಯದ ಡೀನ್ ಶಕುಂತಲಾ, ಸಂಘಟನಾ ಕಾರ್ಯದರ್ಶಿ ಡಾ.ಸುರೇಶ ಬಾಬು ಕೆ.ಎನ್., ಹರ್ಷಿತ್‌ಕುಮಾರ್ ಶೆಟ್ಟಿ ಎನ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಬಿ.ಕೆ. ಸ್ವಾಗತಿಸಿದರು. ಡಾ.ಸುರೇಶ್ ಬಾಬು ಕೆ.ಎನ್. ವಂದಿಸಿದರು. ದೀಕ್ಷಾ, ಕ್ಷಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.