

ಕೊಂಡ್ಲಹಳ್ಳಿ: ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮಡಿಯಲ್ಲಿ ಮಕ್ಕಳ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ಡಾ.ಪಿ.ಗೋವಿಂದರಾಜ್ ತಿಳಿಸಿದರು.
ಸಮೀಪದ ಬೆಳವಿನಮರದಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ಆರೋಗ್ಯ ತಪಾಸಣೆ ವೇಳೆ ಮಾತನಾಡಿದರು.
ಯೋಜನೆಯಡಿ ಜನೆವರಿಯಿಂದ ಜೂನ್‌ವರೆಗೆ ಅಂಗನವಾಡಿ ಮಕ್ಕಳ ತಪಾಸಣೆ, ಜುಲೈನಿಂದ ಡಿಸೆಂಬರ್‌ವರೆಗೆ ಶಾಲಾ ಮಕ್ಕಳು ಸೇರಿದಂತೆ ಹುಟ್ಟಿನಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ, ಔಷಧ ಕಲ್ಪಿಸಲಾಗುವುದು ಎಂದರು.
ನವಜಾತ ಶಿಶುಗಳ ಕಾಯಿಲೆಗಳು, ಮಕ್ಕಳಿಗೆ ಬರುವ ಸಾಮಾನ್ಯ ಕಾಯಿಲೆಗಳು,ನ್ಯೂನತೆ, ಬೆಳವಣಿಗೆ ಕುಂಠಿತ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಲಾಗುವುದು ಎಂದರು.
ಮೊಳಕಾಲ್ಮೂರು ತಾಲೂಕಲ್ಲಿ 35 ಸಾವಿರ ಮಕ್ಕಳಿದ್ದು, ಹಂತ ಹಂತವಾಗಿ ತಪಾಸಣೆ ನಡೆಸಲಾಗುತ್ತಿದೆ. ಕಾರ್ಯಕ್ರಮದಡಿ ಶಾಲೆಗೆ ನೀಡುವ ಕಬ್ಬಿಣದ ಅಂಶವುಳ್ಳ ಮಾತ್ರೆಗಳನ್ನು ಪ್ರತಿ ಸೋಮವಾರ ನೀಡಲು ಶಿಕ್ಷಕರಿಗೆ ಸೂಚಿಸಲಾಗುವುದು ಎಂದರು.
ಇದೇ ವೇಳೆ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು. ನೇತ್ರ ಸಹಾಯಕ ಜೆ.ಮನೋಜ್,ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಸಹ ಶಿಕ್ಷಕ ಬಿ.ಕೆ.ಶಿವಕುಮಾರ್ ಇತರರಿದ್ದರು.