ಮಂಗಳೂರು: ಪರಿವರ್ತನ - ಬದಲಾವಣೆಯನ್ನು ಅಪ್ಪಿಕೊಳ್ಳಿ, ಭವಿಷ್ಯವನ್ನು ರೂಪಿಸಿಕೊಳ್ಳಿ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಸಿಎ ವಿದ್ಯಾರ್ಥಿಗಳ ಸಮಾವೇಶ ಜೂ.14 ಹಾಗೂ 15ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಇದರ ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌತಮ್ ಪೈ ಡಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರ್ಡ್ ಆ್ ಸ್ಟಡೀಸ್, ಐಸಿಎಐ ಆಯೋಜನೆ ಮಂಗಳೂರು ಶಾಖೆ, ದಕ್ಷಿಣ ಭಾರತದ ಪ್ರಾದೇಶಿಕ ಮಂಡಳಿ ಮಂಗಳೂರು ಶಾಖೆ, ದಕ್ಷಿಣ ಭಾರತದ ಸಿಎ ವಿದ್ಯಾರ್ಥಿಗಳ ಸಂಘ ವತಿಯಿಂದ ಈ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶವು ಸಿಎ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಹಾಗೂ ಮಾತೃ ಸಂಸ್ಥೆಯೊಂದಿಗೆ ಸಂಬಂಧವನ್ನು ಸ್ಥಾಪಿಸುವ ಹಾಗೂ ವಿದ್ಯಾರ್ಥಿಗಳ ವೃತ್ತಿ ಮಾರ್ಗವನ್ನು ರೂಪಿಸಬಹುದಾದ ಉತ್ತಮ ಅನುಭವ ನೀಡುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಆತ್ಮವಿಶ್ವಾಸ ವೃದ್ಧಿ ಹಾಗೂ ಚಟುವಟಿಕೆಗಳಿಗೆ ವೇದಿಕೆ ಒದಗಿಸುತ್ತದೆ. ಸಮಾವೇಶದಲ್ಲಿ ತಜ್ಞರಿಂದ ಮಾಹಿತಿ, ಪ್ರೇರಣಾತ್ಮಕ ಕಾರ್ಯಕ್ರಮ, ತಜ್ಞರ ಜತೆ ಬೆರೆಯುವ ಜತೆಗೆ ಹಲವು ಅರ್ಥಪೂರ್ಣ ಅವಕಾಶ ಒದಗಿಸುತ್ತದೆ. ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅನುಪಮ್ ಅಗರ್ವಾಲ್, ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಬಿಒಎಸ್ ಅಧ್ಯಕ್ಷ ಸಿಎ ರಾಜಕುಮಾರ್ ಎಸ್.ಅಡುಕಿಯಾ, ಉಪಾಧ್ಯಕ್ಷ ಸಿಎ ಶ್ರೀಧರ್ ಮುಪ್ಪಾಲಾ ಜತೆಗೆ ಸಂವಾದ ಹಾಗೂ ಎಕ್ಸ್‌ಪರ್ಟ್ ಸಮೂಹ ಸಂಸ್ಥೆ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಸಿಎ ಮಂಗೇಶ್ ಕಿನರೆ, ಸಿಎ ಶಿವಮ್ ಪಾಲನ್ ಅವರು ಮಾಹಿತಿ ನೀಡಲಿದ್ದಾರೆ ಎಂದರು.
ಐಸಿಎಐ ಸಿಕಾಸ ಮಂಗಳೂರು ಶಾಖಾ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಕೆ. ಮಾತನಾಡಿ, ಐಸಿಎಐ ಮಂಗಳೂರು ಶಾಖೆ ಹಾಗೂ ಐಸಿಎಐ ಸಿಕಾಸ ಮಂಗಳೂರು ವಯಿಯಿಂದ ಜೂ,14, 15ರಂದು ಪುರಭವನದಲ್ಲಿ ಬೆಳಗ್ಗೆ 11 ರಿಂದ ರಕ್ತದಾನ ಶಿಬಿರವು ನಡೆಯಲಿದೆ ಎಂದರು.
ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಇದರ ಐಸಿಎಐ ಮಂಗಳೂರು ಶಾಖೆಯ ಕಾರ್ಯದರ್ಶಿ ಸಿಎ ಡ್ಯಾನಿಯಲ್ ಪಿರೇರಾ, ಐಸಿಎಐ ಸಿಕಾಸ ಮಂಗಳೂರು ಶಾಖಾ ಉಪಾಧ್ಯಕ್ಷ ಪ್ರಜ್ವಲ್ ಪಿರೇರಾ, ಕಾರ್ಯದರ್ಶಿ ಬಿ. ಶಶಿಧರ ಪೈ ಉಪಸ್ಥಿತರಿದ್ದರು.