

ಮಂಡ್ಯ: ರಾಷ್ಟ್ರೀಯ ಭೀಮ ಪಡೆಯ ಜಿಲ್ಲಾಧ್ಯಕ್ಷರಾಗಿ ಎಸ್.ಪಿ.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ ಘೋಷಿಸಿದರು.
ಭೀಮ ಪಡೆ ಕಳೆದ 3 ವರ್ಷದಿಂದ ದಲಿತ ಸಮುದಾಯದ ಪರ ಹೋರಾಟ ಮಾಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ನೇಮಕ ಮಾಡುವ ಸಲುವಾಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಲಿತ ಸಮುದಾಯದ ಪರ ಹೋರಾಡುವ ಸಲುವಾಗಿ ಕಟ್ಟಿನಿಟ್ಟಿನ ಯುವಕರ ಪಡೆಯ ಇದಾಗಿದೆ. ಸಕ್ರಿಯವಾಗಿ ರಾಜ್ಯಾದ್ಯಂತ ಕಾರ್ಯ ಚಟುವಟಿಕೆಗಳನ್ನು ಮಾಡಲಿದೆ. ನಾರಾಯಣಸ್ವಾಮಿ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು, ಪಡೆಯನ್ನು ಸಂಘಟಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿ, ಸೆ.11ರಂದು ನಗರದ ಎಸ್ಸಿ/ಎಸ್ಟಿ ನೌಕರರ ಸಂಘದ ಆವರಣದಲ್ಲಿ ಭೀಮ ಪಡೆಯ 15 ಜನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿಜಯೇಂದ್ರಮೂರ್ತಿ, ರಾಜ್ಯ ಕಾರ್ಯದರ್ಶಿ ನಿತ್ಯಾನಂದ, ಸದಸ್ಯ ವೈರಮುಡಿ ಇದ್ದರು.