

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಗೌರವಿಸುತ್ತದೆ. ಸಮಗ್ರ ಯೋಗಕ್ಷೇಮ ಮತ್ತು ನೈಸರ್ಗಿಕ ಚಿಕಿತ್ಸೆಗೆ ಒತ್ತು ನೀಡುತ್ತದೆ. 2014ರಿಂದ ಕೇಂದ್ರ ಸರ್ಕಾರ ಆಯುರ್ವೇದ ಇಲಾಖೆಗೆ ಪ್ರತ್ಯೇಕ ಸ್ಥಾನಮಾನ ನೀಡಿದೆ. ಆಯುರ್ವೇದ ಚಿಕಿತ್ಸಾ ವ್ಯವಸ್ಥೆಯು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ರೋಗಗಳನ್ನು ತಡೆಗಟ್ಟಲು ಸಹಕಾರಿ ಎಂದು ಗುತ್ತಲ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಹೊಂಬಾಳೆ ಹೇಳಿದರು.
ಜಿಲ್ಲಾಡಳಿತದಿಂದ ಧನ್ವಂತರಿ ಜಯಂತಿಯ ಅಂಗವಾಗಿ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಫೆಡರೇಶನ್ ಅಧ್ಯಕ್ಷ ಡಾ. ರವೀಂದ್ರ ವೈ. ಮಾತನಾಡಿ, ಆಧುನಿಕ ಚಿಕಿತ್ಸಾ ಸಂಪ್ರದಾಯವು ವಿಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿ ಆಯುರ್ವೇದ ಔಷಧ ಹೆಚ್ಚು ಬೇಡಿಕೆಯಲ್ಲಿತ್ತು. ಆದ್ದರಿಂದ ಆಯುರ್ವೇದದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಸಂಗಪ್ಪ ಕೊಟ್ಟೂರ ಮತ್ತು ಡಾ. ನೀತಾ ಜೋಗಿನ್ ಅವರು ಆಯುರ್ವೇದ ಔಷಧ ತಯಾರಿಕೆಯ ಉಪಯೋಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಆಯುಷ್ ಆರೋಗ್ಯಾಽಕಾರಿ ಡಾ. ಗಣೇಶ ಕಬಾಡೆ ಅಧ್ಯಕ್ಷತೆ ವಹಿಸಿದ್ದರು. ಡಾ. ಶಂಕರ ಕೊಟ್ರೆ, ಡಾ. ಸವಿತಾ ಹುಣಸಿಮರದ, ಅಥರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಜನೀಶ್, ಮಹಾಗಣಪತಿ ವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಸ್. ತೆಗ್ಗಿ ಹಾಗೂ ಆಯುರ್ವೇದ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.