ಕೊಟ್ಟುಕತ್ತೀರ ಪ್ರಕಾಶ್, ಯಶೋಧಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

film aword
Published on

ಮಡಿಕೇರಿ: ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಕಂದೀಲು ಕನ್ನಡ ಚಲನಚಿತ್ರಕ್ಕೆ ಚಿತ್ರದ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ರಾಷ್ಟ್ರಪತಿಗಳಿಂದ ಮಂಗಳವಾರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ೭೧ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ೭೧ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಿತ್ರ ವಿಭಾಗಗಳಲ್ಲಿ ಕನ್ನಡ ಸೇರಿದಂತೆ ಒಟ್ಟು ೧೩ ಪ್ರಾದೇಶಿಕ ಭಾಷೆಗಳ ೧೩ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು.

ಕೊಡಗು ಜಿಲ್ಲೆಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ಮಿಸಿ, ನಿರ್ದೇಶಿಸಿರುವ ಕಂದೀಲು ಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಂದೀಲು ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಬೆಳಕು ಚೆಲ್ಲಲಾಗಿದೆ. ಕಂದೀಲು ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿರುವ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ಪಡೆದು ಹರ್ಷ ವ್ಯಕ್ತಪಡಿಸಿದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ಪತಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಇಡೀ ಚಿತ್ರತಂಡ ಹಾಗೂ ಕಲಾವಿದರ ಸಹಕಾರದಿಂದ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಈ ಪ್ರಶಸ್ತಿ ಚಲನಚಿತ್ರ ರಂಗದಲ್ಲಿ ಮತ್ತಷ್ಟು ಸೇವೆಯನ್ನು ಸಲ್ಲಿಸಲು ಸ್ಫೂರ್ತಿ ತುಂಬಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net