

ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕತ ಶಿಕ್ಷಕ, ಹಿರಿಯಡ್ಕ ಕುದಿ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ (67 ವರ್ಷ) ಸೋಮವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಆಂಗ್ಲ ಭಾಷಾ ಬೋಧಕರಾಗಿದ್ದ ಅವರು, 1980ರಲ್ಲಿ ಪ್ರೌಢಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿ ಸ್ಥಾಪಕ ಮುಖ್ಯ ಶಿಕ್ಷಕರಾಗಿ 32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಸೇವಾ ಅವಧಿಯಲ್ಲಿ ವಿಷ್ಣುಮೂರ್ತಿ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಬೆಂಬಲದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆರಂಭದಿಂದ ಇದುವರೆಗೂ ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿತ್ತು. ವಸಂತ ಶೆಟ್ಟಿ ಅವರು ಸರ್ಕಾರ ಮಧ್ಯಾಹ್ನದ ಬಿಸಿಯೂಟ ಆರಂಭಿಸುವ ಎಂಟು ವರ್ಷ ಮೊದಲು ದಾನಿಗಳ ನೆರವಿನಿಂದ ಬಿಸಿ ಗಂಜಿಯೂಟ ಪ್ರಾರಂಭಿಸಿದ್ದರು. ಶಾಲೆಯಲ್ಲಿ ಕರ್ನಾಟಕ ಸಂಗೀತ, ಯಕ್ಷಗಾನವನ್ನು ಆರಂಭದಿಂದಲೇ ಕಲಿಸಲಾಗುತ್ತಿದೆ. ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 4 ವರ್ಷ, ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ ಶೆಟ್ಟಿಯವರು ಊರಿನ ದೇವಸ್ಥಾನ, ದೈವಸ್ಥಾನ ಸಮಿತಿ ಅಧ್ಯಕ್ಷರಾಗಿ, ಕುದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀಣೋರ್ದ್ದಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಸಿರಿತುಳು ಚಾವಡಿಯ ಒಡಿಪು ಅಧ್ಯಕ್ಷರಾಗಿ, ಮುಖ್ಯ ಶಿಕ್ಷಕರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು, ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿದ್ದು, ತೌಳವ ಸಂಸತಿಯ ವೈಶಿಷ್ಟ್ಯಗಳನ್ನು ಮನಮುಟ್ಟುವಂತೆ ತಿಳಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರನ್ನು ಅಗಲಿದ್ದಾರೆ.