ಮಾಗಡಿ ಮಹಿಳೆಯರಿಗೆ ಪುರಸ್ಕಾರ

1 lxr 4....No...
Published on

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ

ಸಮೀಪದ ಮಾಗಡಿ ಗ್ರಾಮದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. 2012 ರಲ್ಲಿ ಪ್ರಾರಂಭವಾದ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘದಲ್ಲಿ ಒಟ್ಟು 12 ಜನರಿದ್ದಾರೆ. ಎಲ್ಲರೂ ಹಿಂದುಳಿದ ವರ್ಗದವರು. ರೇಖಾ ತಳವಾರ, ಗೌರವ್ವ ಹೆಳವರ, ರತ್ನವ್ವ ತಳವಾರ, ದ್ಯಾಮವ್ವ ಶಿರುಂದ, ಗಿರಿಜವ್ವ ಮಲಗೌಡರ, ಶಿವವ್ವ ಭಜಂತ್ರಿ, ಲಕ್ಷ್ಮವ್ವ ಗುಂಜಳ, ಗೌರವ್ವ ಕಟ್ಟಿಮನಿ, ವಿಜಯಲಕ್ಷ್ಮೀ ಕುರ್ತಕೋಟಿ, ಚನ್ನಬಸವ್ವ ಹಿತ್ತಲಮನಿ, ಸುಮಾ ನಾಯಕ,ಫಕ್ಕೀರವ್ವ ವಡ್ಡರ ಸಾಧಕ ಮಹಿಳೆಯರು.

ಪ್ರಾರಂಭದಲ್ಲಿ ಪ್ರತಿ ಸದಸ್ಯರು ವಾರಕ್ಕೆ 20 ರೂ.ಗಳಂತೆ ಸೇರಿಸಿ ಸಂಘದ ಖಾತೆಗೆ ಜಮೆ ಮಾಡುತ್ತಾ ಕಡಿಮೆ ಮೊತ್ತದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. 2015 ರಿಂದ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಸೇರ್ಪಡೆಗೊಂಡು ಲಕ್ಷ ರೂ.ವರೆಗೂ ಸಾಲ ಸೌಲಭ್ಯ ಪಡೆಯುವ ಮೂಲಕ ಟೇಲರಿಂಗ್, ಕಿರಾಣಿ ವ್ಯಾಪಾರ, ಹೋಟೆಲ್, ಕಸಬರಿಗೆ ತಯಾರಿಕೆ, ಕುರಿ ಸಾಕಾಣಿಕೆ, ಕೃಷಿ, ಹೈನುಗಾರಿಗೆ ಮಾಡುವ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ಸಂಜೀವಿನಿ ಒಕ್ಕೂಟ, ಸ್ಥಳೀಯ ಕೆವಿಜಿ ಬ್ಯಾಂಕ್ ಮತ್ತು ಸಂಘದ ಉಳಿತಾಯ ಖಾತೆಯಿಂದ ಅನೇಕ ಬಾರಿ ಲಕ್ಷಾಂತರ ರೂ ಸಾಲ ಪಡೆದು ಸಕಾಲಿಕ ಮರುಪಾವತಿ ಮಾಡುವ ಮೂಲಕ ಸಂಘ ಮತ್ತು ಸದಸ್ಯರು ಆರ್ಥಿಕ ಪ್ರಗತಿ ಹೊಂದುವಲ್ಲಿ ಶ್ರಮಿಸಿದ್ದಾರೆ. ಇದೀಗ ಸಂಘ ಒಟ್ಟು 50 ಲಕ್ಷ ರೂ. ವಹಿವಾಟು ನಡೆಸುವಷ್ಟು ಸಮರ್ಥವಾಗಿದೆ.

ಸಂಘದ ಮಹಿಳೆಯರು ಕೇವಲ ಸಾಲ ಪಡೆದು ಸ್ವಯಂ ಪ್ರಗತಿ ಹೊಂದುವುದಲ್ಲದೇ ಸರ್ಕಾರ, ಗ್ರಾಪಂ, ಸ್ಥಳೀಯ ಸಂಸ್ಥೆಗಳು ನಡೆಸುವ ಆರೋಗ್ಯ, ಶಿಕ್ಷಣ, ಮತದಾನ, ಸರ್ಕಾರದ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.ಸಂಘದ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ರಾಜ್ಯದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಮಾದರಿಯಾಗಿದ್ದಾರೆ. ಇವರ ಸೇವೆ, ಪ್ರಾಮಾಣಿಕ ಪ್ರಯತ್ನ, ಸಂಘದ ನಿರ್ವಹಣೆ, ಸರ್ಕಾರ ಉದ್ದೇಶ ಸಾಫಲ್ಯತೆ ಪರಿಗಣಿಸಿದ ಕೇಂದ್ರ ಸರ್ಕಾರ ರಾಷ್ಟ್ರೀಯ ಪುರಸ್ಕಾರ ನೀಡುತ್ತಿದೆ. ಮಾ.7 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಈ ಪುರಸ್ಕಾರ ನೀಡಲಿದ್ದಾರೆ.

ಸರ್ಕಾರ ಗ್ರಾಮೀಣ ಪ್ರದೇಶಗಳ ಮಹಿಳೆಯರು ಅನುಭವಿಸುವ ಬಡತನ, ಉದ್ಯೋಗ ಸಮಸ್ಯೆ, ಆರ್ಥಿಕ ಮುಗ್ಗಟ್ಟಿನಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಜೀವಿನಿ (ಕೆಎಸ್​ಆರ್​ಎಲ್​ಪಿಎಸ್) ಯೋಜನೆಯಡಿ ಕಡಿಮೆ ಶುಲ್ಕದಲ್ಲಿ ನೀಡುವ ಸಾಲಸೌಲಭ್ಯ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕ, ಸಾಮಾಜಿಕ ಸ್ವಾವಲಂಬನೆ ಮತ್ತು ಆತ್ಮ ವಿಶ್ವಾಸದ ಬದುಕು ಕಟ್ಟಿಕೊಳ್ಳುವ ಮೂಲಕ ಮಹಿಳೆಯರಿಗೆ ಮಾದರಿಯಾಗಿರುವ ಮಾಗಡಿ ಗ್ರಾಮದ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘ ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ. ಜಿಲ್ಲೆಯಲ್ಲಿ 5770 ಸಂಘಗಳಿದ್ದರೂ ಈ ಪುರಸ್ಕಾರ ಲಭಿಸಲು ಈ ಸಂಘ ಅನುಸರಿಸಿದ ಸೂತ್ರಗಳು, ಕೈಗೊಂಡ ಜೀವನೋಪಾಯ ಚಟುವಟಿಕೆಗಳು, ಅವರ ಸಾರ್ಥಕ ಬದುಕಿಗೆ ಮಾರ್ಗದರ್ಶನ ಮಾಡಿದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರಣರಾಗಿದ್ದಾರೆ.| ಡಾ. ಕೆ. ಆನಂದ್ ಜಿಪಂ ಸಿಇಒ ಗದಗಕಡುಬಡತನ, ಸಣ್ಣ ಮಕ್ಕಳು, ಉದ್ಯೋಗ ಅರಸಿಕೊಂಡು ಹೋಗಲು ಆಗದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ನಾವು ಸಮಾನ ಮನಸ್ಕರು ರಚಿಸಿಕೊಂಡ ಸ್ವ-ಸಹಾಯ ಸಂಘ ಬದುಕಿಗೆ ದಾರಿ ತೋರಿತು. ಸರ್ಕಾರ, ಬ್ಯಾಂಕಿನ ಸಹಾಯದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಚಹಾ ಅಂಗಡಿ ನಡೆಸುವ ಮೂಲಕ ನನ್ನ 3 ಹೆಣ್ಣು ಮಕ್ಕಳಿಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯವಾಗಿದೆ. ಆಗ ಏನೂ ಅರಿಯದ ನಾನು ಈಗ ಎಲ್ಲ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದೆ. ಇದಕ್ಕೆ ಸಂಘದ ಶಕ್ತಿಯೇ ಕಾರಣವಾಗಿದೆ.| ಗಿರಿಜಮ್ಮ ಹೆಳವರ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net