

ರಾಯಚೂರು: ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಕೀಟಶಾಸ ವಿಭಾಗದ ಮುಖ್ಯಸ್ಥರ ಡಾ.ಎ.ಜಿ.ಶ್ರೀನಿವಾಸ ಕೃಷಿ ತಂತ್ರಜ್ಞರ ಸಂಸ್ಥೆಯಿಂದ ನೀಡಲಾಗುವ ಡಾ.ಎಂ.ಪುಟ್ಟರುದ್ರಯ್ಯ ಸ್ಮಾರಕ ರಾಷ್ಟ್ರೀಯ ದತ್ತಿ ಪ್ರಶಸ್ತಿಗೆ ಭಾಜೀನರಾಗಿದ್ದಾರೆ.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಜರುಗಿದ 55ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕೇಂದ್ರ ಸರ್ಕಾರದ ರೈತರ ಆದಾಯ ದ್ವಿಗುಣ ಸಬಲೀಕರಣ ಸಂಸ್ಥೆ ಅಧ್ಯಕ್ಷ ಡಾ.ಅಶೋಕ ದಳವಾಯಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಎ.ಜಿ.ಶ್ರೀನಿವಾಸ ಕೃಷಿ ಕ್ಷೇತ್ರದಲ್ಲಿನ ಸಂಶೋಧನೆ, ವಿಸ್ತರಣೆಯಲ್ಲಿನ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಸಾಯನಿಕ, ಕೀಟನಾಶಕ ಬಳಸದೆ ಪ್ರಮುಖ ಕೀಟಪೀಡೆಗಳನ್ನು ಸಂಪೂರ್ಣ ಹತೋಟಿ ಮಾಡಿದ ದೇಶದ ಪ್ರಥಮ ಕೃಷಿ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಡಾ.ಶ್ರೀನಿವಾಸ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಮಾಜಿ ನಿರ್ದೇಶಕಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷೆ ಡಾ.ನಂದಿನಿ ಕುಮಾರಿ, ಕಾರ್ಯದರ್ಶಿ ವಿ.ಕೆ.ಕಮತರ, ಉಪಾಧ್ಯಕ್ಷ ಮಹಾಂತೇಶಪ್ಪ ಉಪಸ್ಥಿತರಿದ್ದರು.