

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನ ನಿಮಿತ್ತ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಮಾ. 10ರಂದು ಸಂಜೆ 5.30ಕ್ಕೆ ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಭವನದಲ್ಲಿ ಹಿರಿಯ ಸಂಗೀತಗಾರರಿಗೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಯುವ ಸಂಗೀತಗಾರರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
2024-25ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿಯನ್ನು ಗಾಯಕ ಬಳ್ಳಾರಿಯ ಪಂ. ಡಿ. ಕುಮಾರ ದಾಸ್ ಹಾಗೂ ಯುವ ಪ್ರಶಸ್ತಿಯನ್ನು ಶಿರಸಿಯ ಸಂಗೀತಗಾರ ವಿನಾಯಕ ಹೆಗಡೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ರಾಷ್ಟ್ರೀಯ ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಯುವ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಅತಿಥಿಗಳಾಗಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಆಗಮಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಅಧ್ಯಕ್ಷೆ ದಿವ್ಯ ಪ್ರಭು, ಸದಸ್ಯರಾದ ಪಂ.ಎಂ. ವೆಂಕಟೇಶಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಸದಸ್ಯರು ಉಪಸ್ಥಿತರಿರುವರು. ನಂತರ ಪ್ರಶಸ್ತಿ ಪುರಸ್ಕೃತರಾದ ವಿನಾಯಕ ಹೆಗಡೆ, ಪಂ. ಡಿ ಕುಮಾರ ದಾಸ್ ಗಾಯನ ಪ್ರಸ್ತುತಪಡಿಸುವರು ಎಂದು ಪ್ರಕಟಣೆ ತಿಳಿಸಿದೆ.