

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕ್ ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಅನುಷ್ಠಾನಕ್ಕೆ ಸಂಬಂಧಿಸಿ 20232-2024ರ ಅವಧಿಯಲ್ಲಿ ಮಾಡಿದ ಉತ್ತಮ ಸಾಧನೆಗೆ ಮತ್ತೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ.
ನವದೆಹಲಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಅವರಿಗೆ ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಕಾರ್ಯದರ್ಶಿ ಡಾ. ವಿವೇಕ ಜೋಶಿ ಪ್ರಶಸ್ತಿ ಪ್ರದಾನ ಮಾಡಿದರು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎ್ಆರ್ಡಿಎ) ಅಧ್ಯಕ್ಷ ಡಾ. ದೀಪಕ ಮೊಹಾಂತಿ, ಕೆನರಾ ಬ್ಯಾಂಕಿನ ಎಸ್ಎಲ್ಬಿಸಿ ಮಹಾ ಪ್ರಬಂಧಕ ಭಾಸ್ಕರ, ಇತರರು ಇದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಕಾಂತ ಭಂಡಿವಾಡ, ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕ್ ಆದ್ಯತೆ ನೀಡಿದೆ. ಅಟಲ್ ಪಿಂಚಣಿ ಯೋಜನೆ ಕಾರ್ಮಿಕ ವರ್ಗಕ್ಕೆ ವರದಾನವಾಗಿದ್ದು, ನಿದಿರ್ಷ್ಟಪಡಿಸಿದ ಕಂತನ್ನು ಪಾವತಿಸಿ 61ನೇ ವರ್ಷದಿಂದ 1000 ರೂ.ದಿಂದ 5000 ರೂ. ಮಿತಿಯಲ್ಲಿ ಪಿಂಚಣಿ ಪಡೆಯಬಹುದು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಈ ವರೆಗೆ 427736 ಅಟಲ್ ಪಿಂಚಣಿ ಖಾತೆಗಳನ್ನು ಮಾಡಿಸಿದೆ. ಪ್ರಶಸ್ತಿ ಸ್ವೀಕರಿಸಿದ್ದು ಸಂತೋಷ ತಂದಿದ್ದಲ್ಲದೆ, ಪ್ರಶಸ್ತಿ ಬ್ಯಾಂಕಿನ ಗೌರವ ಹೆಚ್ಚಿಸಿದೆ. ಯೋಜನೆ ಅನುಷ್ಠಾನದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗುವುದು ಎಂದರು.