

ಸೋಮವಾರಪೇಟೆ: ಜೇಸಿ ಇಂಡಿಯಾ ವತಿಯಿಂದ ಕೊಡುವ ವಾರ್ಷಿಕ ಎಫಿಶೀಯನ್ಸಿ ಪ್ರಶಸ್ತಿಯನ್ನು ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕ ಪಡೆದುಕೊಂಡಿದೆ.
ತರಬೇತಿ, ವ್ಯವಹಾರ, ಕಾರ್ಯಕ್ರಮ, ಬೆಳವಣಿಗೆ ಮತ್ತು ನಿರ್ವಹಣೆ ಹೀಗೆ ಐದು ವಿಭಾಗಗಳಿಗೆ ಅನುಗುಣವಾಗಿ ಕೈಗೊಂಡ ಯೋಜನೆಗಳನ್ನು ಆಧಾರಿಸಿ ಪ್ರಶಸ್ತಿ ನೀಡಲಾಗುತ್ತದೆ. 2023ರ ವರ್ಷಾಂತ್ಯದಲ್ಲಿ ಸೋಮವಾರಪೇಟೆ ಘಟಕ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆ ಪ್ರಶಸ್ತಿಗೆ ಭಾಜನವಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ 68ನೇ ನ್ಯಾಟ್‌ಕಾನ್-2023 ರಾಷ್ಟ್ರೀಯ ಸಮ್ಮೇಳನದಲ್ಲಿ ವಲಯ-15ರ ಅಧ್ಯಕ್ಷ ಅನೂಶ್ ಅವರಿಂದ ಸೋಮವಾರಪೇಟೆ ಘಟಕದ ಅಧ್ಯಕ್ಷೆ ಎಂ.ಎ. ರುಬೀನಾ ಪ್ರಶಸ್ತಿ ಸ್ವೀಕರಿಸಿದರು. ಜೇಸಿ ಇಂಡಿಯಾದ ಜನರಲ್ ಲೀಗಲ್ ಕೌನ್ಸಿಲ್‌ನ ವರ್ಷಾ ಮೆನನ್, ಪೊನ್ನಂಪೇಟೆ ಜೇಸಿ ಸಂಸ್ಥೆ ಕಾರ್ಯದರ್ಶಿ ಶರತ್ ಸೋಮಣ್ಣ ಇದ್ದರು.