

ಮಂಡ್ಯ: ಪ್ರೌಢವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ಚಟಗಳ ವ್ಯಸನಿಗಳಾಗುತ್ತಿರುವುದು ಆತಂಕದ ವಿಷಯ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆ(ಮಾಜಿ ಪುರಸಭೆ)ಯಲ್ಲಿ ರೋಟರಿ ಸಂಸ್ಥೆ, ನೆಹರು ಯುವಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ, ಎನ್‌ಸಿಸಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವ್ಯಸನ ಮುಕ್ತ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಪ್ರೌಢವಯಸ್ಸಿನ ಮನಸ್ಸುಗಳು ಏನು ಮಾಡಬೇಕು ಹಾಗೂ ಮಾಡಬಾರದೆನ್ನುವ ಕುತೂಹಲದ ಮನೋಭಾವ ಹೊಂದಿರುತ್ತಾರೆ. ಅವರಿಗೆ ವ್ಯಸನಗಳಿಂದಾಗುವ ಪರಿಣಾಮದ ಅರಿವು ಇರುವುದಿಲ್ಲ. ಬದಲಾಗುವ ಹಾರ್ಮೋನ್‌ಗಳ ಸೆಳೆತಕ್ಕೆ ವ್ಯಸನಿಗಳಾಗುವುದು ಕಂಡು ಬರುತ್ತಿವೆ ಎಂದು ನುಡಿದರು.
ಡಿಡಿಪಿಯು ಉಮೇಶ್ ಮಾತನಾಡಿ, ವ್ಯಸನಗಳಿಂದಾಗುವ ಸಮಸ್ಯೆಯ ಮಾಹಿತಿ ಇಲ್ಲದೇ ಹಾಗೂ ಆಕರ್ಷಣೆಗೊಳಗಾಗಿ ಕೆಟ್ಟ ಚಟಕ್ಕೆ ದಾಸರಾಗುತ್ತಾರೆ. ಆದ್ದರಿಂದ ವ್ಯಸನ ಮುಕ್ತ ಸಮಾಜ, ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ತಿಮ್ಮರಾಜು ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಕೆಎಸ್‌ಒಯು ಪ್ರಾದೇಶಿಕ ನಿರ್ದೇಶಕಿ ಮಿಲನಾ, ಮಾನಸಿಕ ಆಪ್ತ ಸಮಾಲೋಚಕ ಸುಹೆಲ್, ರೋಟರಿ ಸಂಸ್ಥೆ ಕಾರ್ಯದರ್ಶಿ ರಾಜೇಶ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್, ಪಿಡಿಎಫ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಅನಂತ, ಸಾಮಾಜಿಕ ಕಾರ್ಯಕರ್ತ ಮೋಹನ್‌ಕುಮಾರ್, ಶಿಕ್ಷಕಿ ಲಕ್ಷ್ಮೀ ಇತರರಿದ್ದರು.