ಬೇತಮಂಗಲ ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತೆ

IMG-20240809-WA0164
Published on

ಬೇತಮಂಗಲ ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತೆಸ್ವಚ್ಛತೆ, ಸೌಕರ್ಯಗಳಿಗೆ ಪರಿಶೀಲನಾ ಸಮಿತಿ ಪ್ರಶಂಸೆ - ಆಡಳಿತಾಧಿಕಾರಿ ವೈದ್ಯರ ಹುದ್ದೆಗೆ ನೇಮಕ ಬಾಕಿ

ಜೆ.ಜಿ.ಶ್ರೀನಿವಾಸಮೂರ್ತಿ ಬೇತಮಂಗಲ
ಕೆಜಿಎಫ್​ ತಾಲೂಕು ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದ ಮಾನ್ಯತೆ ಪಡೆದಿದ್ದು, ಈ ರಾಷ್ಟ್ರೀಯಮಟ್ಟದ ಪ್ರಶಸ್ತಿ ಲಭಿಸುವ ನಿರೀೆ ಮೂಡಿದೆ.
ಕೆಜಿಎಫ್​ ತಾಲೂಕು ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ 5 ವರ್ಷಗಳ ಹಿಂದೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆದಿದ್ದು, ಈಗ ರಾಷ್ಟ್ರೀಯ ಗುಣಮಟ್ಟದ ಭರವಸೆ ಮತ್ತು ಮಾನದಂಡಗಳ ಸಮಿತಿ (ಎನ್​ಕ್ಯೂಎಎಸ್​) ಪರಿಶೀಲನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆಯುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ಸಿಗಬೇಕಾಗಿರುವ ಸೌಲಭ್ಯಗಳಿಗೆ ಅರ್ಹತೆ ಪಡೆದಿದೆ. ಆದರೆ ಹತ್ತಾರು ಕೊರತೆಗಳು ಆಸ್ಪತ್ರೆಗಳಲ್ಲಿದ್ದು, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರೆ ರಾಷ್ಟ್ರೀಯಮಟ್ಟದ ಪ್ರಶಸ್ತಿ ಮುಡಿಗೇರುವುದು ಖಚಿತ.
ಪ್ರಶಸ್ತಿಗೆ ಮಾನದಂಡಗಳೇನು?: ಆಸ್ಪತ್ರೆ ಆವರಣಗಳಲ್ಲಿ ಸ್ವಚ್ಛತೆ, ರೋಗಿಗಳ ಹಕ್ಕು ರಕ್ಷಣೆ, ರೋಗಿಗಳೊಂದಿಗೆ ಸಿಬ್ಬಂದಿ ಬಾಂಧವ್ಯ, ಗುಣಮಟ್ಟದ ಚಿಕಿತ್ಸೆ ಜತೆಗೆ ಆಸ್ಪತ್ರೆಯ ಎಲ್ಲ ಸೌಲಭ್ಯ ಒದಗಿಸುವುದು, ವೈದ್ಯರ ಕೊಠಡಿ, ವಾರ್ಡ್​, ಶೌಚಗೃಹ ಸ್ವಚ್ಛತೆ, ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮ, ಸಿಬ್ಬಂದಿ ಹಾಜರಾತಿ ಹಾಗೂ ಆಸ್ಪತ್ರೆಯ ಪ್ರತಿ ಚಟುವಟಿಕೆಯನ್ನೂ ಪರಿಗಣಿಸಲಾಗುವುದು. ಹಣಕಾಸು ವ್ಯವಹಾರ, ಔಷಧ ವಿತರಣೆ, ವಿಶೇಷವಾಗಿ ವೈದ್ಯರು, ಸಿಬ್ಬಂದಿ ಸೇರಿ ಆಸ್ಪತ್ರೆಯ ವಿರುದ್ಧ ಸಾರ್ವಜನಿಕರಿಂದ ಯಾವುದೇ ಆರೋಪ, ಆಕ್ಷೇಪಣೆ ಇರಬಾರದು. ಸಿಬ್ಬಂದಿಯ ಸೇವಾ ಮನೋಭಾವ, ಮಾನವೀಯತೆ, ಕರ್ತವ್ಯ ನಿಷ್ಠೆ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
ಹೃದಯವಂತ ಮಕ್ಕಳ ತಜ್ಞ: ಹೃದಯವಂತ ವೈದ್ಯ ಎಂದೇ ಖ್ಯಾತಿ ಹೊಂದಿರುವ ಮಕ್ಕಳ ತಜ್ಞ ಡಾ.ವಿನಯ್​ ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೀಗಿದೆ ಸ್ಥಿತಿಗತಿ
ಬೇತಮಂಗಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಚಿನ್ನಪ್ಪ ಅವರು ಸ್ವಂತ ಜಮೀನಿನಲ್ಲಿ ಉಚಿತವಾಗಿ ನೀಡಿರುವ ಸುಮಾರು 2 ಎಕರೆ ಜಾಗದಲ್ಲಿ ಟ್ರಾಮಾ ಕೇರ್​ ಯೋಜನೆಯಡಿ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಕೇಂದ್ರ ನಿಮಾರ್ಣಗೊಂಡಿದ್ದು, 7 ವರ್ಷಗಳ ಹಿಂದೆ ನಿರ್ಮಿಸಿರುವ ಸುಸಜ್ಜಿತ ಕಟ್ಟಡ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲ ಎನ್ನುವಂತಿದೆ. ಆಸ್ಪತ್ರೆ ಒಳಗೆ&ಹೊರ ರೋಗಿಗಳ ಚೀಟಿ ವಿತರಣೆ, ವೈದ್ಯಾಧಿಕಾರಿ ಕೊಠಡಿ, 4 ವೈದ್ಯರ ಕೊಠಡಿಗಳಿವೆ. ಚುಚ್ಚುಮದ್ದು ಕೊಠಡಿ, ಆಪ್ತ ಸಮಾಲೋಚನಾ ಕೊಠಡಿ, ಕೇಂದ್ರ ಮತ್ತು ರಾಜ್ಯಸರ್ಕಾರ ನೀಡುವ ವಿಶೇಷ ಯೋಜನೆಗಳ ಅನುಷ್ಠಾನಕ್ಕಾಗಿ ನೇಮಿಸಿರುವ ಸಿಬ್ಬಂದಿ ಕೊಠಡಿ, ಸಂವಾದ, ತರಬೇತಿ, ಕಾರ್ಯಕ್ರಮಗಳನ್ನು ಆಯೋಜಿಸುವ ಸಭಾಂಗಣ ಹೊಂದಿದೆ. ಸುಸಜ್ಜಿತ ಹೆರಿಗೆ ಕೇಂದ್ರ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ, ಸ್ವಾಗತ ಕೌಂಟರ್​, ಮಹಿಳೆಯರ, ಪುರುಷರ ಪ್ರತ್ಯೇಕ ಶೌಚಗೃಹಗಳೂ ಲಭ್ಯವಿದೆ.
ಇನ್ನೂ ಏನೇನು ಅಗತ್ಯವಿದೆ?
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿದರೂ ಹಲವು ಸೌಲಭ್ಯ ಒದಗಿಸಿಲ್ಲ. ಕನಿಷ್ಠ 400 ರೋಗಿಗಳು ಬರುವ ಆಸ್ಪತ್ರೆಯಲ್ಲಿ ಎಕ್ಸ್​ರೇ ಯಂತ್ರ ಇತ್ಯಾದಿ ಅವಶ್ಯಕ ಸೌಲಭ್ಯ ಕಲ್ಪಿಸಬೇಕಿದೆ. 5 ವೈದ್ಯರ ಅಗತ್ಯವಿದ್ದು, 4 ಮಂದಿ ಇದ್ದಾರೆ. ಆಡಳಿತಾಧಿಕಾರಿ ನೇಮಕವಾಗಿಲ್ಲ. ರಾತ್ರಿ ಪಾಳಿಯಲ್ಲಿ ವೈದ್ಯರೇ ಇರುವುದಿಲ್ಲ. ಆದ್ದರಿಂದ ರಾತ್ರಿವೇಳೆ ರೋಗಿಗಳಿದ್ದರೆ ಕೆಜಿಎಫ್​, ಕೋಲಾರಕ್ಕೆ ಕಳುಹಿಸಲಾಗುತ್ತದೆ ಎಂಬ ಆರೋಪವೂ ಕೇಳಿಬರುತ್ತಿದೆ. ಆಸ್ಪತ್ರೆಗೆ ರಾತ್ರಿ&ಹಗಲು ಯಾವುದೇ ಭದ್ರತೆ ಇಲ್ಲದ ಕಾರಣ ರಾತ್ರಿ ಕರ್ತವ್ಯ ನಿರ್ವಹಿಸುವ ಮಹಿಳಾ ಆರೋಗ್ಯ ಅಧಿಕಾರಿ ಮತ್ತು ದಾದಿಯರಿಗೆ ರಕ್ಷಣೆ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಕೆಜಿಎಫ್​ ಶಾಸಕಿ ರೂಪಕಲಾ ಆಸ್ಪತ್ರೆಗೆ ಉಚಿತವಾಗಿ ಆಂಬುಲೆನ್ಸ್​ ನೀಡಿದ್ದಾರೆ. ಆದರೆ, ಅದಕ್ಕೆ ಚಾಲಕರಿಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳು ಪರದಾಡುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ, ಆರೋಪಗಳಿಗೆ ಇತಿಶ್ರೀ ಹಾಡಿ, ಎಲ್ಲ ಸಿಬ್ಬಂದಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ ಈಗ ರಾಷ್ಟ್ರಮಟ್ಟದ ಮಾನ್ಯತೆ ಪಡೆದಿರುವ ಜತೆಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಗೂ ಅರ್ಹವಾಗಬಹುದಾಗಿದೆ.

400 ರೋಗಿಗಳು, ತಿಂಗಳಿಗೆ 35 ಹೆರಿಗೆ
ಇಲ್ಲಿನ ಆಸ್ಪತ್ರೆಗೆ ಪ್ರತಿನಿತ್ಯ ಕನಿಷ್ಠ 400 ರೋಗಿಗಳು ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಾರೆ. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಪ್ರತಿನಿತ್ಯ ಒಂದಾದರೂ ಹೆರಿಗೆ ಮಾಡಿಸಲಾಗುತ್ತದೆ. ತಿಂಗಳಿಗೆ ಸರಾಸರಿ 35 ಹೆರಿಗೆಯನ್ನಾದರೂ ಆಸ್ಪತ್ರೆಯಲ್ಲಿ ಮಾಡಿಸಲಾಗುತ್ತದೆ. ಇಲ್ಲಿ ಇಸಿಜಿ, ಆಕ್ಸಿಜನ್​ ಸೇರಿ ಇತರ ಸೌಲಭ್ಯ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ತುರ್ತು ಸಂದರ್ಭದಲ್ಲಿ ಆಕ್ಸಿಜನ್​ ಪೂರೈಕೆ ಮಾಡಿಕೊಳ್ಳುವ ಸೌಲಭ್ಯವೂ ಇಲ್ಲಿದೆ.
ಶೇ.86 ಅಂಕ
ಬೇತಮಂಗಲ ಆರೋಗ್ಯ ಕೇಂದ್ರ ಪ್ರಶಸ್ತಿಗೆ ಆಯ್ಕೆಯಾಗದಿದ್ದರೂ ರಾಷ್ಟ್ರಮಟ್ಟದ ಪರಿಶೀಲನಾ ಸಮಿತಿ ಪರಿಶೀಲನೆಯಲ್ಲಿ ಶೇ.86 ಅಂಕ ಪಡೆಯುವ ಮೂಲಕ ಮಾನ್ಯತೆ ಪಡೆದುಕೊಂಡಿದೆ. ಅಲ್ಲಿಂದ ಸಿಗುವ ಎಲ್ಲ ಸೌಲಭ್ಯಗಳಿಗೆ ಅರ್ಹತೆ ಪಡೆದಿದೆ.

30 ಹಾಸಿಗೆ, ವೈದ್ಯರೂ ಸೇರಿ ಒಟ್ಟು 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ವೈದ್ಯರು, ಸ್ತ್ರೀ ತಜ್ಞ, ದಂತ, ಅರಿವಳಿಕೆ ತಜ್ಞರ ತಂಡ.
ಆಸ್ಪತ್ರೆಯಲ್ಲಿ 12 ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು. (ಅದರಲ್ಲಿ 6 ಮಂದಿ ಆಸ್ಪತ್ರೆ ವ್ಯಾಪ್ತಿಗೆ ಬರುವ ಆರೋಗ್ಯ ಉಪ ಕೇಂದ್ರಗಳಲ್ಲಿ), ಇಬ್ಬರು ಆರೋಗ್ಯ ನಿರೀಕ್ಷಕರು
ವಿವಿಧ ಯೋಜನೆಗಳ ಅನುಷ್ಠಾನಕ್ಕೆ 10 ಮಂದಿ, ಪ್ರಯೋಗಾಲಯ, ಕಚೇರಿ ಸಿಬ್ಬಂದಿ, ಡಿ ಗ್ರೂಪ್​ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಆಡಳಿತಾಧಿಕಾರಿ ವೈದ್ಯರ ಹುದ್ದೆಗೆ ನೇಮಕ ಬಾಕಿಯಿದೆ.

ಗ್ರಾಪಂ ಅಧ್ಯಕ್ಷರೇ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದು, ಪ್ರತಿ ತಿಂಗಳೂ ಸಭೆ ನಡೆಸಿದಾಗ ಆಸ್ಪತ್ರೆಗೆ ಸೌಲಭ್ಯ ಒದಗಿಸಲು, ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನೇಮಿಸಲು ಸಲಹೆ ನೀಡುತ್ತಿದ್ದೇವೆ. ಈ ಬಗ್ಗೆ ಡಿಎಚ್​ಒ ಗಮನ ಹರಿಸಬೇಕು. ಆಸ್ಪತ್ರೆಗೆ ಸೆಕ್ಯೂರಿಟಿ ನೇಮಿಸಲು ಗ್ರಾಪಂನಿಂದಲೇ ಕ್ರಮ ಕೈಗೊಳ್ಳಲಾಗುವುದು.

ವಿನು ಕಾರ್ತಿಕ್​ ಗ್ರಾಪಂ ಅಧ್ಯಕ್ಷ, ಬೇತಮಂಗಲ

ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿರುವುದು ಸಂತಸ ತಂದಿದೆ. ಇದು ಇಲ್ಲಿನ ವೈದ್ಯರು ಸೇರಿ ಎಲ್ಲ ಸಿಬ್ಬಂದಿ ಸೇವೆಗೆ ಸಂದ ಗೌರವ. ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹುದ್ದೆ ಭರ್ತಿಯಾಗಬೇಕಿದೆ. ಸ್ಕಾ$ನರ್​ ಮತ್ತು ರಕ್ತ ಸಂಗ್ರಹ ಕೇಂದ್ರ ಸೌಲಭ್ಯ ಒದಗಿಸಿದರೆ ಉತ್ತಮ ಸೇವೆ ಸಲ್ಲಿಸಬಹುದು.

ಡಾ.ಸುನಿಲ್​ ಕುಮಾರ್​ ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net