ರಾಷ್ಟ್ರ ಕಟ್ಟುವ ಕೆಲಸಕ್ಕೆ ಹೊಸ ಸ್ಫೂರ್ತಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯ

14 BPL 4 TRRIRANGA RALLEY
Published on

ಬಾಗೇಪಲ್ಲಿ: ಭಾರತದ ಸಾರ್ವಭೌಮತ್ವ ಹಾಗೂ ಸಮೃದ್ಧಿಗಾಗಿ ಸಂಪದ್ಭಭರಿತ ರಾಷ್ಟ್ರ ಕಟ್ಟುವ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸ್ಫೂರ್ತಿ ಹಾಕಿ ಕೊಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಾಗೇಪಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಭಾನುವಾರ ಬಿಜೆಪಿ ಮುಖಂಡ, ಉಪವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿ.ಮುನಿರಾಜು ನೇತೃತ್ವದಲ್ಲಿ ಬಾಗೇಪಲ್ಲಿ, ಚೇಳೂರು ಮತ್ತು ಗುಡಿಬಂಡೆ ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ 150 ಕಿ.ಮೀ ಉದ್ದದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಬಾಗೇಪಲ್ಲಿ ತಾಲೂಕು ಆಂಧ್ರದ ಗಡಿಭಾಗದಲ್ಲಿದ್ದರೂ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಬೈಕ್ ರ‌್ಯಾಲಿಗೆ ಆಗಮಿಸಿರುವ ಜನಸಾಗರ ನೋಡಿದರೆ ಇಲ್ಲಿನ ರೈತಾಪಿ, ಕೃಷಿ ಕೂಲಿ ಕಾರ್ಮಿಕರ ಹಾಗೂ ಯುವಕರಲ್ಲಿ ದೇಶ ಪ್ರೇಮ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಅವರು ನೀಡಿರುವ ಒಂದು ಕರೆಗೆ ಬಾಗೇಪಲ್ಲಿಯ ಪ್ರತಿಯೊಬ್ಬ ನಾಗರಿಕರು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೀರಾ. ಬಾಗೇಪಲ್ಲಿಯ ಜನಸಾಮಾನ್ಯರಲ್ಲಿ ಕಾಣಿಸುತ್ತಿರುವ ದೇಶ ಪ್ರೇಮ, ಉತ್ಸವ ನೋಡಿದರೆ ಬಹುದೊಡ್ಡ ಚಳವಳಿಯಂತೆ ಕಾಣಿಸುತ್ತಿದೆ. ಭಕ್ತಿಯಿಂದ ಸ್ವಾತಂತ್ರ್ಯೋತ್ಸವ ಅಚರಿಸುತ್ತಿರುವ ಬಾಗೇಪಲ್ಲಿಯ ಜನತೆಗೆ ಬಿಜೆಪಿ ಅಭಾರಿಯಾಗಿರುತ್ತದೆ ಎಂದರು.


ಬಿಜೆಪಿ ಮುಖಂಡ ಹಾಗೂ ಎಸ್‌ಟಿಟಿಆರ್ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿಭಾಗದ ಬಾಗೇಪಲ್ಲಿ ಕ್ಷೇತ್ರದಲ್ಲಿ ರಾಷ್ಟ್ರಧ್ವಜದ ಮಹತ್ವ ಹಾಗೂ ದೇಶ ಭಕ್ತಿಯ ಬಗ್ಗೆ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಕ್ಷೇತ್ರದ 33 ಗ್ರಾಪಂಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಗುತ್ತಿದೆ. ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿಯಲ್ಲಿ ಬಲಿಷ್ಠ ಭಾರತ, ದೇಶ ಪ್ರೇಮವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲಾಧ್ಯಕ್ಷ ಆರ್.ಪ್ರತಾಪ್, ಗ್ರಾಪಂ ಅಧ್ಯಕ್ಷರಾದ ಕೆ.ವಿ.ಮಂಜುನಾಥರೆಡ್ಡಿ, ಪಿ.ಎಸ್.ವೆಂಕಟರೆಡ್ಡಿ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಮುಖಂಡರಾದ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಪಾವಜೇನಹಳ್ಳಿ ನಾಗರಾಜರೆಡ್ಡಿ, ಚನ್ನಕೃಷ್ಣಾರೆಡ್ಡಿ, ಆ.ನ.ಮೂರ್ತಿ, ಮಲ್ಲಿಕಾರ್ಜುನರೆಡ್ಡಿ, ಚೇಳೂರು ಶ್ರೀರಾಮಪ್ಪ ಮತ್ತಿತರರು ಇದ್ದರು.

ಸಚಿವರ ಬೈಕ್ ರೈಡ್: ಸಚಿವ ಡಾ.ಕೆ.ಸುಧಾಕರ್ ರ‌್ಯಾಲಿ ವೇಳೆ ಸವಾರರಿಗೆ ಹೆಲ್ಮೆಟ್ ವಿತರಿಸಿ ಬೈಕ್ ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಯುವಕರು ಸಿಲ್ಲೆ ಹೊಡೆದು ಉತ್ಸಾಹವನ್ನು ಸಂಭ್ರಮಿಸಿದರು. ಬೈಕ್ ರ‌್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್‌ಗಳಲ್ಲಿ ಬಂದಿದ್ದರು. ರ‌್ಯಾಲಿ ಪ್ರಾರಂಭಕ್ಕೂ ಮುನ್ನವೇ ವಾಹನಗಳ ದಟ್ಟಣೆ ಹೆಚ್ಚಾಗಿ 2 ಕಿ.ಮೀ ದೂರ ಟ್ರಾಪಿಕ್ ಜಾಮ್ ಆಗಿ ನಾಗರೀಕರು ಕೆಲ ಸಮಯ ತೊಂದರೆ ಅನುಭವಿಸಿದರು.

ಹೆಲ್ಮೆಟ್ ವಿತರಣೆ: ದೇಶದ ಆಧಾರ ಸ್ಥಂಭಗಳಾದ ಯುವಪೀಳಿಗೆ ಭಾರತ ಆಸ್ತಿ ಹಾಗೂ ಆಧಾರ ಸ್ತಂಭಗಳಾಗಿದ್ದು, ದ್ವಿಚಕ್ರ ವಾಹನ ಚಾಲನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಸಚಿವ ಡಾ. ಕೆ.ಸುಧಾಕರ್ ಯುವಕರಿಗೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net