

ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ಸ್ ಪ್ರಶಸ್ತಿಗಳನ್ನು ಮುಳ್ಳೂರು ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್.ಸತೀಶ್ ಮತ್ತು ನಾಪೋಕ್ಲು ರಾಮಟ್ರಸ್ಟ್‌ನ ಶಿಕ್ಷಕಿ ಶೋಭಾವಿಜಯ ಅವರುಗಳಿಗೆ ಪ್ರಧಾನ ಮಾಡಲಾಯಿತು.
ನಗರದ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿತ ಕಾರ್ಯಕ್ರಮದಲ್ಲಿ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಪ್ರಧಾನ ಮಾಡಿದರು.
ಈಸಂದರ್ಭ ಮಾತನಾಡಿದ ಸತೀಶ್, ಕೋವಿಡ್ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅಟ್ಟಣಿಗೆ ನಿರ್ಮಿಸಿ ಮೊಬೈಲ್ ಸಿಗ್ನಲ್ ಸಿಗುವಂತೆ ಮಾಡಿ ಶಿಕ್ಷಣ ನೀಡಿದ್ದು ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಕಾರಣವಾಯಿತು. ತನ್ನ ಸೇವೆಗೆ ಸಾರ್ವಜನಿಕರು ನೀಡುತ್ತಿರುವ ಶ್ಲಾಘನೆ ತನ್ನಲ್ಲಿ ಮತ್ತಷ್ಟು ಛಲವನ್ನು ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾವಿಜಯ, ರೋಟರಿ ಮಿಸ್ಟಿ ಹಿಲ್ಸ್ ಶ್ರೀರಾಮಟ್ರಸ್ಟ್‌ನಲ್ಲಿ ಮೊದಲು ಪ್ರಾರಂಭಿಸಿದ ಇಂಟರ್ ಆಕ್ಟ್ ಕ್ಲಬ್ ನಿಂದಾಗಿ ವಿದ್ಯಾರ್ಥಿಗಳಲ್ಲಿ ಸಮಾಜಸೇವಾ ಚಟುವಟಿಕೆಗಳ ಬಗ್ಗೆ ಜಾಗ್ರತಿ ಮೂಡಿಸುವಲ್ಲಿ ನೆರವಾಗಿದೆ. ನಾಯಕತ್ವ ಗುಣ ಬೆಳೆಸುವಲ್ಲಿ ಈ ಸಂಸ್ಥೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕ ವರ್ಗದಲ್ಲಿಯೂ ರೋಟರಿಯ ಸೇವಾ ಕಾರ್ಯಗಳು ಆದರ್ಶಪ್ರಾಯವಾಗಿದೆ ಎಂದರು.
ಕಾರ್ಯಕ್ರಮವನ್ನು ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಎಚ್.ಟಿಅನಿಲ್, ಲೀನಾ ಪೂವಯ್ಯ ನಿರ್ವಹಿಸಿದರು, ಅಜಿತ್ ನಾಣಯ್ಯ ಸ್ವಾಗತಿಸಿ, ಬಿ.ಜಿ.ಅನಂತಶಯನ ವಂದಿಸಿದರು.