ನಾಟಿಕೋಳಿ ಸಾಂಬರ್, ರಾಗಿ ಮುದ್ದೆ ಊಟದ ಸ್ಪರ್ಧೆ ಮಾ.5ಕ್ಕೆ

Published on

ಮೈಸೂರು: ದಶಮುಖ ಸಾಮಾಜಿಕ ಸೇವಾ ಟ್ರಸ್ಟ್‌ನ 9ನೇ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 5ರಂದು ರಾಜ್ಯ ಮಟ್ಟದ ನಾಟಿಕೋಳಿ ಸಾಂಬರ್‌ನಲ್ಲಿ ರಾಗಿ ಮುದ್ದೆ ಊಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಬೊಮ್ಮೇಗೌಡ ತಿಳಿಸಿದರು.

ಬೆಂಗಳೂರಿನ ಬಿಳೇಕಹಳ್ಳಿ ವಿಜಯ ಬ್ಯಾಂಕ್ ಬಡಾವಣೆಯಲ್ಲಿರುವ ಮುಲ್ಕಿ ಸುಂದರಾಮ್ ಶೆಟ್ಟಿ ಮೆಮೋರಿಯಲ್ ಹಾಲ್‌ನಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆರೋಗ್ಯಕರ ಜೀವನಕ್ಕೆ ರಾಗಿಯ ಮಹತ್ವ ಕುರಿತ ಉಪನ್ಯಾಸವೂ ಇರಲಿದೆ. ಖ್ಯಾತ ವೈದ್ಯರು, ಪೋಷಕ ತಜ್ಞರು ವಿಷಯ ಮಂಡಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಿಜ್ಜಾ, ಬರ್ಗರ್, ನೂಡಲ್ಸ್ ತಿನ್ನೋದು ಬಿಡಿ, ರಾಗಿ ಗಂಜಿ, ರಾಗಿ ಮುದ್ದೆ ತಿಂದು ಆರೋಗ್ಯವಾಗಿರಿ ಶೀರ್ಷಿಕೆ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 15 ನಿಮಿಷದಲ್ಲಿ ಅರ್ಧ ಕೆ.ಜಿ.ಗೂ ಹೆಚ್ಚು ಮುದ್ದೆ ತಿನ್ನುವವರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 7,500 ರೂ. ನೀಡಲಾಗುವುದು ಎಂದು ಹೇಳಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ಎ.ರವಿಶಂಕರ್ ಮಾತನಾಡಿ, ಟ್ರಸ್ಟ್‌ನಿಂದ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದ್ದು, ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ರಾಗಿಯ ಮಹತ್ವ ತಿಳಿಸಲು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರಿಂದ ನಮ್ಮ ಆಹಾರ ಸಂಸ್ಕೃತಿ ಪರಿಚಯ ಮಾಡಿಕೊಡಲಾಗುದು. ಆಸಕ್ತರು ಮೊ.92422 95531 ಸಂಪರ್ಕಿಸಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net