

ತುಮಕೂರು: ತಾಂತ್ರಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ತಿಳಿಯುವ ಅವಶ್ಯಕತೆಯಿದೆ ಎಂದು ಪಶು ಪಾಲನಾ ಇಲಾಖೆ ಆಯುಕ್ತ ಎಸ್.ಆರ್. ನಟೇಶ್ ಅಭಿಪ್ರಾಯಪಟ್ಟರು.
ನಗರದ ಎಸ್‌ಎಸ್‌ಐಟಿ ಕಾಲೇಜು ಸಭಾಂಗಣದಲ್ಲಿ ಪಶು ವೈದ್ಯಕೀಯ ಸಂಘ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ತಾಂತ್ರಿಕ ವಿಚಾರ ಸಂಕಿರಣ’ಉದ್ಘಾಟಿಸಿ ಮಾತನಾಡಿದರು. ಪಶು ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಪ್ರತಿ ನಿತ್ಯ ಒಂದಿಲ್ಲೊಂದು ಆವಿಷ್ಕಾರ ಹಾಗೂ ಲಸಿಕೆಗಳನ್ನು ಬಳಸಲಾಗುತ್ತಿದೆ, ಈ ನಿಟ್ಟಿನಲ್ಲಿ ಕಾರ್ಯನಿರತ ವೈದ್ಯರು ಅರಿವು ಬೆಳಸಿಕೊಂಡು ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ರೈತರ ಬದುಕು ಅವರು ಸಾಕುವ ಪಶುಗಳನ್ನು ಅವಲಂಭಿಸಿದ್ದು, ನಮ್ಮೆಲ್ಲರ ಮೇಲೆ ಜವಾಬ್ದಾರಿ ಇದೆ, ದೇಶದ ಪ್ರಗತಿಯಲ್ಲಿ ಗರಿಷ್ಠ ಕೊಡುಗೆ ನೀಡುವ ರೈತಾಪಿ ವರ್ಗಕ್ಕೆ ನೇರವಾಗಿ ನೆರವು ನೀಡುವ ಅವಕಾಶವಿದೆ ಎಂದರು. ಪಶು ಚಿಕಿತ್ಸಾ ವಿಧಾನಗಳು ಆಧುನೀಕರಣಗೊಂಡಂತೆ, ಚಿಕಿತ್ಸಾಲಯಕ್ಕೆ ಬರುವ ರೈತರ ಸಂಖ್ಯೆ ಇಳಿಮುಖವಾಗುತ್ತಿದೆ, ರೈತರ ಮನೆಯ ಬಾಗಿಲಿಗೆ ಸಂಚಾರಿ ಚಿಕಿತ್ಸಾಲಯ ಸೇವೆ ನೀಡಲಾಗುತ್ತಿದ್ದು, ಸ್ಕ್ಯಾನಿಂಗ್ ಹಾಗೂ ಆಪರೇಷನ್‌ಗೆ ಅನುಕೂಲವಾಗುವಂತೆ, ಮೊಬೈಲ್ ಚಿಕಿತ್ಸಾಲಯ ಆಧುನೀಕರಣಗೊಳಿಸಲಾಗುತ್ತಿದೆ ಎಂದರು.
ಕೋರೋಲಾ, ಎಂಬೋಲಾದಂತಹ ಮಾರಕ ರೋಗಗಳು ಜಾನುವಾರುಗಳಿಂದಲೇ ಪ್ರಸಾರವಾಗಿದ್ದು, ಜಾನುವಾರಗಳ ಬಗ್ಗೆ ವಿಶೇಷ ನಿಗಾವಹಿಸಬೇಕಿದೆ. ವನ್ಯ ಮೃಗಾಲಯಗಳ ನಿರ್ವಹಣೆಗೆ ಅಗತ್ಯವಾಗುವಂತೆ ಡಿಪ್ಲೊಮಾ ಪ್ರಾರಂಭಿಸುವ ನಿಟ್ಟಿನಲ್ಲಿ ವಿವಿಯೊಂದಿಗೆ ಚರ್ಚಿಸಲಾಗುವುದು ಎಂದರು.
ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿದರು, ಉಪನಿರ್ದೇಶಕ ಡಾ.ಎಲ್. ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಡಾ.ಶ್ರೀಧರ್, ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ.ನಾಗಣ್ಣ, ಡಾ.ನಂಜೇಗೌಡ, ಡಾ.ಮಹದೇವ್, ಡಾ.ನಾಗಭೂಷಣ್ ಮತ್ತಿತರರು ಇದ್ದರು.
ನಿವೃತ್ತ ನೌಕರರಿಗೆ ಸನ್ಮಾನ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸಿಬ್ಬಂದಿ ಹಾಗೂ ಕುಟುಂಬದವರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.
ತುಮಕೂರು ಜಿಲ್ಲೆಯಲ್ಲಿ ಗುರಿ ಸಾಧಿಸಲು ಅವಕಾಶವಿದೆ, 2001ರಿಂದ ಬರ ಪರಿಸ್ಥಿತಿಯಲ್ಲಿ ಮೇವಿನ ನಿರ್ವಹಣೆ ಮಾಡುವುದು ಪಶು ಇಲಾಖೆ ಸವಾಲಿನ ಕೆಲಸವಾಗಿದೆ. ಡಾ.ಎಂ.ಟಿ.ಮಂಜುನಾಥ್ ಇಲಾಖೆ ನಿರ್ದೇಶಕ