

ಮೈಸೂರು: ವಿದ್ಯಾರ್ಥಿಗಳಿಗೆ ಅಂಕಗಳಷ್ಟೇ ಮಾನದಂಡವಲ್ಲ, ಮಾನವೀಯ ಗುಣಗಳು ಮುಖ್ಯ. ಅಂತಹ ಸಂಸ್ಕಾರವನ್ನು ನಟರಾಜ ಶಿಕ್ಷಣ ಸಂಸ್ಥೆ ನೀಡುತ್ತಿದೆ ಎಂದು ವಿಜಯವಾಣಿ ಮೈಸೂರು ಆವೃತ್ತಿ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಫನ್‌ಫೇರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನರಂಜನೆ ಮನಸ್ಸನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು. ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡು ನಮ್ಮಲ್ಲಿ ಇರಬೇಕು. ಮೂಲ ಪರಂಪರೆ ಜತೆಗಿರಬೇಕು ಎಂದರು.
ಮನರಂಜನೆಯ ನೆಪದಲ್ಲಿ ಅಶ್ಲೀಲತೆಯ ಅನಾವರಣವಾಗಬಾರದು. ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ವ್ಯಕ್ತಿಯ ವಿಕಸನಕ್ಕೆ ಪೂರಕವಾಗಿರುವ ಜತೆಗೆ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ನಟರಾಜ ಸಂಸ್ಥೆಯು ಪಠ್ಯಕ್ಕೆ ಮಾತ್ರ ಅವಕಾಶ ನೀಡದೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿದೆ. ಇದು ಕೂಡ ಬದುಕಿಗೆ ಪೂರಕವಾಗಿ ಪರಿಣಮಿಸುತ್ತದೆ ಎಂದು ತಿಳಿಸಿದರು.
ಜೀವಧಾರ ರಕ್ತನಿಧಿ ಕೇಂದ್ರದ ಎಂಡಿ ಎಸ್.ಇ.ಗಿರೀಶ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಓದಿನ ಜತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರಿಯಬೇಕಾದರೆ ಲೆಕ್ಕಾಚಾರ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಡಾ.ಎಂ. ಶಾರದಮ್ಮ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದ್‌ಮೂರ್ತಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎನ್.ಜಿ. ಲೋಕೇಶ್ ಇದ್ದರು.
ಫನ್‌ಫೇರ್ ಅಂಗವಾಗಿ ಉಚಿತ ರಕ್ತ ತಪಾಸಣೆ ನಡೆಯಿತು. ಜತೆಗೆ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳ, ದೆವ್ವದ ಮನೆ, ವಿಭಾಗವಾರು ಕಲಾ, ವಾಣಿಜ್ಯ ವಸ್ತುಪ್ರದರ್ಶನ, ವಿವಿಧ ಮನರಂಜನೆ ಆಟಗಳು, ಡಿಜೆ ಹೌಸ್, ಸೆಲ್ಫಿ ಕಾರ್ನರ್ ಗಮನ ಸೆಳೆದವು.