

ಬೇಲೂರು: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ದೊಡ್ಡಬೇಡಗೆರೆ ಗ್ರಾಮದ ಡಿ.ನಟರಾಜ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಹಿಂದಿನ ಅಧ್ಯಕ್ಷರಾಗಿದ್ದ ಶಿವಶಂಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಬ್ಯಾಂಕ್‌ನ ನಿರ್ದೇಶಕ ದೊಡ್ಡಬೇಡಗೆರೆ ಗ್ರಾಮದ ಡಿ.ನಟರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕಿ ಶಕ್ಕು ಅವರು ಚುನಾವಣಾ ಪ್ರಕ್ರಿಯೆ ನಂತರ ಡಿ.ನಟರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷ ದೊಡ್ಡಬೇಡಗೆರೆ ಗ್ರಾಮದ ಡಿ.ನಟರಾಜ್ ಮಾತನಾಡಿ, ನಮ್ಮ ಬ್ಯಾಂಕ್‌ನ ಎಲ್ಲ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಗಾಗಿದ್ದು, ಅವರ ಆಶಯದಂತೆ ನನ್ನ ಅವಧಿಯಲ್ಲಿ ಬ್ಯಾಂಕ್‌ನ ಅಭಿವೃದ್ಧಿಗೆ ಹಾಗೂ ರೈತ ಸಮುದಾಯಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಬ್ಯಾಂಕಿನ ನಿರ್ದೇಶಕರು ಮತ್ತು ಷೇರುದಾರರ ಸಲಹೆ ಸಹಕಾರ ಪಡೆದು ಕೆಲಸ ಮಾಡಲಿದ್ದೇನೆ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ನೂತನವಾಗಿ ಜೆಡಿಎಸ್ ಬೆಂಬಲಿತ ನಟರಾಜ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಈ ಬ್ಯಾಂಕ್ ರೈತರಿಗೆ ಆಧಾರವಾಗಿದೆ. ಇಲ್ಲಿ ರೈತರಿಗೆ ಅಲ್ಪಾವದಿ ಮತ್ತು ದೀರ್ಘಾವದಿ ಸಾಲ ನಿಡುವ ಮೂಲಕ ಸಹಕಾರ ನೀಡುತ್ತ ಉತ್ತಮ ಹೆಸರು ಗಳಿಸಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರಾದ ನಟರಾಜ್ ಹೆಚ್ಚಿನ ಕೆಲಸ ಮಾಡಲಿ. ಅಲ್ಲದೆ ನಾನೂ ಈ ಬ್ಯಾಂಕಿನ ಅಧ್ಯಕ್ಷನಾದ ನಂತರವೇ ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿ ಶಾಸಕನಾದವನು. ಅದೇ ರೀತಿ ನಟರಾಜ್ ಸಹ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲಿ ಎಂದರು.
ಕೇಂದ್ರ ತೆಂಗು ನಾರು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ, ಪ್ರಧಾನ ಕಾರ್ಯದರ್ಶಿ ಮಹೇಶ್, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡ ವೀರೇಗೌಡ, ನಿರ್ದೇಶಕರಾದ ಶಿವಶಂಕರ್, ಹಿರಿಯಣ್ಣಗೌಡ, ರಮೆಶ್, ಮಾಜಿ ತಾಪಂ ಅಧ್ಯಕ್ಷ ಪರ್ವತಯ್ಯ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಮಲ್ಲೇಗೌಡ, ರವಿಕುಮಾರ್, ನಾಗೆಶ್, ರೈತ ಸಂಘದ ಸ್ವಾಮಿಗೌಡ, ಭೋಗಮಲ್ಲೇಶ್ ಸೇರಿದಂತೆ ಇತರರಿದ್ದರು.