

ಬೆಂಗಳೂರು: ಸಾವಧಾನವಾಗಿ ಕುಳಿತು ಶಾಸ್ತ್ರೀಯ ಸಂಗೀತವನ್ನು ಕೇಳುವ ಶ್ರೋತೃಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಉಡುಪಿಯ ಹಿರಿಯ ಸಂಗೀತ ತಜ್ಞ, ಶ್ರೀರಂಜನಿ ಸಂಗೀತ ಸಭಾ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ಅರವಿಂದ ಹೆಬ್ಬಾರ್ ಹೇಳಿದರು.
ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರಿನ ನಟನ ತರಂಗಿಣಿ ಸ್ಕೂಲ್ ಆ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ 20ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ಕಳೆದ 10 ವರ್ಷದ ಅವಯಲ್ಲಿ ಮಂಗಳೂರು- ಉಡುಪಿ ಭಾಗದಲ್ಲಿ ಶಾಸ್ತ್ರೀಯಸಂಗೀತ ಕೇಳುವವರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಸಂತೋಷದ ವಿಚಾರ. ಇಂದು ಹಣಕ್ಕೇ ಮಹತ್ವ ಹೆಚ್ಚಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ನೆಮ್ಮದಿ ಗಳಿಸಲು ಕಲೆ, ಸಾಹಿತ್ಯ, ಸಂಗೀತಕ್ಕೂ ಮಾನ್ಯತೆಯನ್ನು ಜನರೇ ಕೊಡಬೇಕು ಎಂದರು.
ಸಾವಿರಾರು ಸಂಗೀತ ಕಾರ್ಯಕ್ರಮಗಳ ಸಂಘಟಕ, ಶಿವಮೊಗ್ಗದ ವಿದ್ಯಾಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶಾಸ್ತ್ರೀ ಅವರು ‘ಕಲಾಶ್ರಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿ, ಮಕ್ಕಳ ಸಮಗ್ರ ವಿಕಸನಕ್ಕೆ ಶಾಸೀಯ ಸಂಗೀತ ಪೂರಕವಾಗಿದೆ ಎಂದರು. ಬಾಲ್ಯದಲ್ಲಿಯೇ ಮನೆಯಲ್ಲಿ ಸಂಗೀತ ಕಲಿಸುವ ಪರಂಪರೆಗೆ ಮಹತ್ವ ನೀಡಬೇಕು. ಶಾಲಾ ಪಠ್ಯಕ್ರಮದ ಅಧ್ಯಯನಕ್ಕೂ ಈ ಕಲೆ ಪುಷ್ಟಿ ನೀಡುತ್ತದೆ. ಪಾಲಕರು ಈ ಬಗ್ಗೆ ಕಾಳಜಿ ಹೆಚ್ಚಿಸಿಕೊಳ್ಳಬೇಕು ಎಂದರು.
ಬೆಂಗಳೂರಿನ ತಬಲಾ, ಮೃದಂಗ ತಯಾರಕ ಶ್ರೀನಿವಾಸ ಅವರಿಗೆ ‘ನಾದಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ, ನಾಗರತ್ನಾ ಹೆಬ್ಬಾರ, ಮೃದಂಗ ವಿದ್ವಾಂಸ ನಿಕ್ಷಿತ್ ಪುತ್ತೂರು, ಸಂಗೀತ- ನೃತ್ಯ ಕಲಾ ವಿದುಷಿ ವೈ. ಜಿ. ಶ್ರೀಲತಾ, ಶಾಂತ ಲಕ್ಷ್ಮೀ ಶಾಸ್ತ್ರೀ, ಹಿರಿಯ ವಿದುಷಿ ವೈ.ಜಿ.ಪರಿಮಳಾ ಇದ್ದರು.