

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ನಿತ್ಯ ಪೌರಾಣಿಕ ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಜಿಲ್ಲೆಯು ಕಲಾವಿದರ ತಾಣ, ಸಾಂಸ್ಕೃತಿಕ ಚಟುವಟಿಕೆಗಳ ತೊಟ್ಟಿಲಾಗಿದೆ ಎಂದು ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬಸವೇಶ್ವರ ಕಲಾ ವೇದಿಕೆ ಸಂಪಹಳ್ಳಿ ಆಯೋಜಿಸಿದ್ದ ಹನುಮ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ರಂಗಭೂಮಿ ನಿರ್ದೇಶಕ ಗುರುಮೂರ್ತಿಗೆ ಬೆಳ್ಳಿಕಿರೀಟ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆ ಪೌರಾಣಿಕ ನಾಟಕ ಮತ್ತು ಸಾಂಸ್ಕೃತಿಕ ಕಲಾವಿದರ ತಾಣ. ಒಬ್ಬ ಕಲಾವಿದನ ಸಾಧನೆಗೆ ಬೆಳ್ಳಿಕಿರೀಟ ಧಾರಣೆ ಮಾಡಿ ಗೌರವಿಸುವುದು ದೊಡ್ಡತನವಾಗಿದೆ. ಇದು ಕಲೆಗೆ ಸಂದ ಗೌರವವಾಗಿದೆ. ಕಲಾವಿದರ ಬದುಕು ಮತ್ತಷ್ಟು ಹಸನಾಗಲಿ, ಭವಿಷ್ಯ ಉಜ್ವಲವಾಗಿರಲಿ ಎಂದು ಹೇಳಿದರು.
ಹರಿಕಥೆ ವಿದ್ವಾನ್ ಗಂಗಾಧರಾಚಾರ್ ಮಾತನಾಡಿ, ಆತ್ಮ ತೃಪ್ತಿ ಸಿಗುವುದು ಕಲೆಯಿಂದ ಮಾತ್ರ. ಶತಶತಮಾನದಿಂದಲೂ ಕಲೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ನಾಟಕವೇ ಕಲೆಯಲ್ಲಿ ಬಹಳ ಶ್ರೇಷ್ಠವಾಗಿದೆ. ಜಿಲ್ಲೆಯಲ್ಲಿ ಕಲೆಗೆ ಪ್ರೋತ್ಸಾಹ ನೀಡುವಷ್ಟು ದೊಡ್ಡತನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ವೇದಿಕೆ ಅಧ್ಯಕ್ಷ ಸಂಪಹಳ್ಳಿ ಬಸವರಾಜು ಮಾತನಾಡಿ, ರಂಗಭೂಮಿಯ ಅತ್ಯುನ್ನತ ನಿರ್ದೇಶಕರ ಸಾಲಿಗೆ ಗುರುಮೂರ್ತಿ ಸೇರುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿರುವ ಕಲಾಮಂದಿರವು ಬಹುವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಕಲಾಮಂದಿರ ಬಹುಬೇಗ ಸುಸಜ್ಜಿತ ರಂಗಮಂದಿರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ರಂಗಭೂಮಿ ಕಲಾವಿದರಾದ ಎಂ.ಜವರೇಗೌಡ, ಎಚ್.ಬಿ.ನಿಂಗಣ್ಣ, ಸಾತನೂರು ವೆಂಕಟೇಶ್, ರಾಜಣ್ಣ, ಕಾಳಮ್ಮ, ರತ್ನಗುರುಮೂರ್ತಿ, ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ ಇತರರಿದ್ದರು.