ಸಂಸ್ಕೃತಿಯನ್ನು ಬಿಂಬಿಸುತ್ತವೆ ನಾಟಕಗಳು: ಪುರುಷೋತ್ತಮಾನಂದನಾಥ ಸ್ವಾಮೀಜಿ ಅಭಿಮತ

08_11_Mdy_05(Nataka)
Published on

ಮಂಡ್ಯ: ನಾಟಕಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿವೆ ಎಂದು ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾತನೂರು ಕಂಬದ ನರಸಿಂಹಸ್ವಾಮಿ ಕೃಪಾ ಪೋಷಕ ನಾಟಕ ಮಂಡಳಿ ವತಿಯಿಂದ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಹಾಗೂ ಕಲಾವಿದ ಎಚ್.ಎಂ.ಮಂಜುನಾಥ್ ಬೆಳ್ಳಿ ಕಿರೀಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ನಾಡು, ನುಡಿಯನ್ನು ತಿಳಿಸುವ ಪೌರಾಣಿಕ ನಾಟಕಗಳು ಇಂದಿಗೂ ಪ್ರಸ್ತುತ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ನಡೆಯಬೇಕು. ಇದರಿಂದ ಪೌರಾಣಿಕದ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಆಲವರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಶರೀರಕ್ಕೆ ಸಾವು ಇದೆ. ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಕೆಲವು ನಾಟಕದಲ್ಲಿ ಪ್ರಧಾನ ಪಾತ್ರ ಮಾಡುತ್ತಾರೆ. ಆ ಪಾತ್ರಧಾರಿಯ ರೂಪದಲ್ಲಿ ಅವರನ್ನು ಕಾಣಲು ಸಾಧ್ಯವಾಗಿದೆ. ಶ್ರದ್ಧೆಯಿಂದ ಮಾಡುವ ಈ ನಾಟಕವು ಎಲ್ಲರಿಗೂ ಒಳಿತು ಮಾಡಲಿ. ಪಾತ್ರಧಾರಿಗಳು ತನ್ಮಯತೆಯಲ್ಲಿ ತಲ್ಲೀನರಾಗಿ ಪಾತ್ರಗಳನ್ನು ನಿಭಾಯಿಸುವುದು ಸಾಹಸ ಹಾಗೂ ಕರಗತವಾಗಿದೆ ಎಂಬುದು ಸತ್ಯ ಎಂದು ತಿಳಿಸಿದರು.

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ, ಕಲಾಪೋಷಕರಾದ ಬಿ.ಎಂ.ಅಪ್ಪಾಜಪ್ಪ, ಮರ್ದಿನಿ ರಮೇಶ್, ಕಲಾವಿದರಾದ ಸಾತನೂರು ವೆಂಕಟೇಶ್, ಎಚ್.ಎಂ.ಮಂಜುನಾಥ್, ಕಾಳೇನಹಳ್ಳಿ ಕೆಂಚೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net