

ಕೆ.ಎಂ.ದೊಡ್ಡಿ: ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕಗಳಂತಹ ಸಾಂಸಕ್ಕತಿಕ ಕಾರ್ಯಕ್ರಮಗಳು ಸಹಕಾರಿ ಎಂದು ಕಾಂಗ್ರೆಸ್ ಯುವ ಮುಖಂಡ, ಬಿಇಟಿ ಟ್ರಸ್ಟ್ ಸಿಇಒ ಆಶಯ್ ಮಧು ಮಾದೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ದೇವರಹಳ್ಳಿ ರಸ್ತೆಯ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸತ್ಯಮೂರ್ತಿ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನರಂಜನೆಗಾಗಿಯೇ ಸೀಮೀತವಾಗದೆ ನಮ್ಮ ಮನೋವಿಕಾಸಕ್ಕೆ ಪೂರಕವಾಗಿರಬೇಕು. ರಂಗಕಲೆ ಉಳಿಸಲು ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.
ಸದಾ ಒತ್ತಡದ ಜೀವನ ನಡೆಸುತ್ತಿರುವ ರೈತರು ಮತ್ತು ನಾಗರಿಕರು ಪೌರಾಣಿಕ, ಸಾಮಾಜಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ನೈಜ ಕಲಾವಿದರೂ ಇರುವುದೇ ನಾಟಕಗಳಲ್ಲಿ. ಗುಬ್ಬಿ ವೀರಣ್ಣ ಕಂಪನಿಯಿಂದ ಬಂದ ಹಲವು ಕಲಾವಿದರು ಇಂದು ಚಿತ್ರರಂಗದಲ್ಲಿದ್ದಾರೆ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆಗಳಿಂದ ರಂಗಭೂಮಿ ಕಲೆ ಕ್ಷೀಣಿಸುತ್ತಿದ್ದು, ಅದನ್ನು ಉಳಿಸುವ ಜವಾಬ್ದಾರಿ ಯುವಕರ ಹೆಗಲ ಮೇಲಿದೆ. ಗ್ರಾಮೀಣ ಕಲೆಯನ್ನು ಉಳಿಸಿ, ಬೆಳಸಬೇಕು ಎಂದು ಸಲಹೆ ನೀಡಿದರು.
ಸಿ.ಎ.ಕೆರೆ ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ತಾ.ಪಂ. ಮಾಜಿ ಸದಸ್ಯ ಬಿ.ಗಿರೀಶ್, ಅಣ್ಣೂರು ಸೊಸೈಟಿ ಅಧ್ಯಕ್ಷ ಆರ್.ಸಿದ್ದಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ, ಮುಖಂಡರಾದ ಶೆಟ್ಟಹಳ್ಳಿ ದ್ಯಾಪೇಗೌಡ, ದೇವರಹಳ್ಳಿ ಜಯರಾಮು, ಜಿ.ಡಿ.ಹಳ್ಳಿ ಸಿದ್ದರಾಜು, ಜಯರಾಮು, ಪುಟ್ಟರಾಜು, ತಿಪ್ಪೂರು ಅಂದಾನಿ, ದೇವರಾಜು, ಪ್ರಕಾಶಚಾರಿ, ದೇಶಿಗೌಡ ಸೇರಿದಂತೆ ಇತರರಿದ್ದರು.