ಕ್ರಿಯಾಶೀಲತೆ ಬೆಳೆಸುವ ನಾಟಕಗಳು: ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ

24mlk-2
Published on

ಮೇಲುಕೋಟೆ: ನಾಟಕಗಳು ಮಕ್ಕಳ ಪ್ರತಿಭೆಯನ್ನು ಹೊರ ತರುವ ಜತೆಗೆ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಮೇಲುಕೋಟೆಯ ಪು.ತಿ.ನ. ಕಲಾಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಶಿಕ್ಷಣ ಇಲಾಖೆ, ನೆರಳು ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ಸಮಾಜದ ಕನ್ನಡಿ ಇದ್ದಂತೆ. ಕಾರಂತ, ಪ್ರಸನ್ನ ರಂಗಪ್ಪ ಮುಂತಾದವರು ನಾಟಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೇರು ನಟ ಡಾ.ರಾಜಕುಮಾರ್ ಸಹ ರಂಗಭೂಮಿ ಹಿನ್ನೆಲೆಯಿಂದ ಬಂದು ಕರ್ನಾಟಕಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಎಚ್.ಧನ್ಯಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆ ನಾಟಕಗಳ ತವರೂರಾಗಿದ್ದು, ಪ್ರತಿಯೊಂದು ಹಳ್ಳಿಗಳಲ್ಲೂ ಇಂದಿಗೂ ಪೌರಾಣಿಕ ನಾಟಕ ಆಯೋಜನೆಯಾಗುತ್ತವೆ. ಆ ಮೂಲಕ ಸ್ಥಳೀಯ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದರು.

ನಾಟಕ ಅಕಾಡೆಮಿ ಸಂಚಾಲಕ ನಿರ್ದೇಶಕ ಜೀವನ್ ಕುಮಾರ್ ಹೆಗ್ಗೋಡು ಅಧ್ಯಕ್ಷತೆ ವಹಿಸಿದ್ದರು. ನೆರಳು ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕಾರ್ತಿಕ್ ಉಪಮನ್ಯು, ಕೋಪು ಗುಣಶೇಖರ್, ಪುತಿನ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net