

ಮಂಡ್ಯ: ಮದ್ಯಪಾನ, ಧೂಮಪಾನ, ಡ್ರಗ್ಸ್, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮದ್ಯಪಾನ ಸೇವನೆ, ಡ್ರಗ್ಸ್ ಸೇರಿದಂತೆ ಇನ್ನಿತರ ದುರಭ್ಯಾಸಗಳು ಸಮಾಜಕ್ಕೆ ಮಾರಕ. ಕುತೂಹಲಕ್ಕಾಗಿ ಮೊದಲು ಸೇವನೆ ಮಾಡಿ ನಂತರ ಅವುಗಳ ದಾಸರಾಗುತ್ತಾರೆ. ಮಾದಕ ವಸ್ತುಗಳ ಸೇವನೆ ಮಾಡುತ್ತಿರುವವರನ್ನು ಅದರಿಂದ ದಾಸಮುಕ್ತರಾಗಲು ಅಗತ್ಯ ಕ್ರಮ ವಹಿಸಿ ಎಂದರು.
ದುಶ್ಚಟಗಳಿಗೆ ಒಳಗಾಗಿರುವ ವ್ಯಕ್ತಿಯಿಂದ ಅವರ ಮಕ್ಕಳು ಹಾಗೂ ಕುಟುಂಬದ ಮೇಲೂ ಬಹಳ ಪರಿಣಾಮ ಬೀರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜತೆಗೆ ನೈತಿಕ ಮೌಲ್ಯಗಳನ್ನು ತಿಳಿಸಿ. ಅವರ ಮನವೊಲಿಸುವ ಪ್ರಯತ್ನ ಮಾಡಬೇಕು. ದುಶ್ಚಟಕ್ಕೆ ಬಲಿಯಾಗಿರುವ ವ್ಯಕ್ತಿಗಳು ಯಾವುದೋ ಒತ್ತಡ, ಕೌಟುಂಬಿಕ ಸಮಸ್ಯೆಯಿಂದ ಚಟಗಳಿಗೆ ದಾಸರಾಗಿರುತ್ತಾರೆ. ದುಶ್ಚಟಗಳಿಗೆ ಒಳಗಾಗಿರುವರು ವ್ಯಕ್ತಿಗಳನ್ನು ವ್ಯಸನ ಮುಕ್ತ ಮಾಡಿ ಸಮಾಜದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಜೀವಿಸಲು ಪ್ರೇರೆಪಿಸಬೇಕು ಎಂದರು.
ಜಿಲ್ಲಾಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು, ಕ್ರಿಯಾಶೀಲ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವವವರನ್ನು ನೇಮಿಸಿ. ಕುಡಿತದಿಂದ ಉಂಟಾಗುವ ತೊಂದರೆ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಶಾಲೆಯ ಮಕ್ಕಳಿಗೆ ತಿಳಿಸಬೇಕು. ಒಂದು ವೇಳೆ ಶಾಲಾ ಮಕ್ಕಳ ತಂದೆಯರು ಕುಡಿತಕ್ಕೆ ಬಲಿಯಾಗಿದ್ದಾರೆ. ಅವರಿಗೆ ತಮ್ಮ ಮಕ್ಕಳ ಕೈಯಿಂದ ಪತ್ರ ಬರೆಸಿ ಆ ಮೂಲಕ ಅವರ ತಂದೆಯರಿಗೆ ತಿಳಿವಳಿಕೆ ಮೂಡಿಸಬಹುದು. ಪ್ರತಿ ಶಾಲೆಗಳಲ್ಲಿ ನಶಾ ಮುಕ್ತ ಅಭಿಯಾನಕ್ಕೆ ಸಂಬಂಧಿಸಿದಂತೆ ಜಾಗೃತಿ ಜಾಥಾ ಹಾಗೂ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ಕೋಮಲ್‌ಕುಮಾರ್ ಮಾತನಾಡಿ, ಕುಡಿತ ವ್ಯಸನಿಗಳಾದವರನ್ನು ಈಗಾಗಲೇ ಮದ್ಯ ಬಿಡಿಸುವ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಮದ್ಯ ತ್ಯಜಿಸಿದಂತಹವರಿಗೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರನ್ನು ಸನ್ಮಾನಿಸುವ ಕೆಲಸವಾಗುತ್ತಿದೆ. ಇದರಿಂದ ಉಳಿದಿರುವ ಮದ್ಯಪಾನ ವ್ಯಸನಿಗಳ ಮನಸ್ಸನ್ನು ಬದಲಾಯಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ಡಿಡಿಪಿಐ ಎಚ್.ಶಿವರಾಮೇಗೌಡ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಇತರರಿದ್ದರು.