

ಮೈಸೂರು: ನೃತ್ಯ ವಿದ್ಯಾ ಪೀಠ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ‘ನರ್ತನ ವೃಕ್ಷಾವಳಿ - 2024’ ಹಾಗೂ ‘ಶ್ರೀ ರಾಮಾಯಣ ದರ್ಶನಂ’ ಪ್ರದರ್ಶನ ಕಾರ್ಯಕ್ರಮವನ್ನು ಫೆ.12 ರಂದು ಸಂಜೆ 4.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಗುರು ವಿದುಷಿ ಸಿ.ಎನ್. ಅನಿತ ಅವರ ನೃತ್ಯ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ‘ನರ್ತನ ವೃಕ್ಷಾವಳಿ’ ಪ್ರದರ್ಶನಗೊಳ್ಳಲಿದ್ದು, ಸಂಸ್ಥೆಯ ವಿವಿಧ ಶಾಖೆಗಳ 100 ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಲಿದ್ದಾರೆ. ವಿಶೇಷವಾಗಿ 5 ವರ್ಷದಿಂದ 45 ವರ್ಷದವರೆಗಿನ ವಿವಿಧ ಕಲಿಕಾ ಹಂತದಲ್ಲಿರುವವರು ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನಟುವಾಂಗದಲ್ಲಿ - ವಿದುಷಿ ರಮ್ಯಾ ರಾಜೇಶ್, ಹಾಡುಗಾರಿಕೆಯಲ್ಲಿ ಕುಮಾರಿ ನಯನ ನಾಗರಾಜ್, ಮೃದಂಗ ವಾದನದಲ್ಲಿ - ವಿದ್ವಾನ್ ಜಿ.ಟಿ.ಸ್ವಾಮಿ, ಪಿಟೀಲು ವಾದನದಲ್ಲಿ ವಿದ್ವಾನ್ ತಾಂಡವಮೂರ್ತಿ ಸಹಕರಿಸಲಿದ್ದಾರೆ.
ಬಳಿಕ ಸಿ.ಎನ್.ಅನಿತಾ ಅವರೊಂದಿಗೆ ವಿದ್ವತ್ ಹಂತದ ವಿದ್ಯಾರ್ಥಿನಿಯರು ವಿಶೇಷವಾದ ನೃತ್ಯ ಸಂಯೋಜನೆಯೊಂದಿಗೆ ‘ಶ್ರೀ ರಾಮಾಯಣ ದರ್ಶನಂ’ಅನ್ನು ಸವಿಸ್ತಾರವಾಗಿ ಏಕಾಹಾರ್ಯ ಪ್ರಯೋಗದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ನಟುವಾಂಗದಲ್ಲಿ ವಿದುಷಿ ನಿಶ್ಚಿತ ಕೃಷ್ಣ, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರು, ಮೃದಂಗವಾದನದಲ್ಲಿ ವಿದ್ವಾನ್ ಪಿ.ಜನಾರ್ಧನರಾವ್ ಹಾಗೂ ವೇಣುವಾದನದಲ್ಲಿ ವಿದ್ವಾನ್ ರಾಕೇಶ್ ಸುಧೀರ್ ಸಹಕರಿಸಲಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನೃತ್ಯ ಗುರು ವಿದುಷಿ ಚಂದ್ರಮತಿ ಅವರು ಉದ್ಘಾಟಿಸಲಿದ್ದಾರೆ. ಶೋಭಾ ಬಾಲಕೃಷ್ಣ, ಜಿ.ಕೆ.ಕಮಲ ಭಾಗವಹಿಸಲಿದ್ದಾರೆ. ಭಾರತೀಯ ಮೀಸಲು ಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ, ಎಎಸ್‌ಐ ಆಗಿ ನಿವೃತ್ತರಾಗಿರುವ ಕೊಡಗಿನ ಕೆ.ಜಿ.ತಂಗಮ್ಮ ಅವರಿಗೆ ‘ಭಾರತ ಕೇಸರಿ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರು ನೃತ್ಯ ವಿದ್ಯಾ ಪೀಠ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಲಾಗುತ್ತದೆ.