ಉದ್ಯಮಿ ಮನೆ ದರೋಡೆ ಆರೋಪಿ ಸೆರೆ - ಕೃತ್ಯಕ್ಕೆ ಬಳಸಿದ ಕಾರು, ೫ ಲಕ್ಷ ರೂ. ವಶ - ೨೦ ದಿನಗಳ ಬಳಿಕ ಬಲೆಗೆ

PTR_23 JAN_3
Published on

ಬೋಳಂತೂರು ಸಮೀಪದ ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಽಕಾರಿಗಳ ಸೋಗಿನಲ್ಲಿ ಕೋಟ್ಯಂತರ ರೂ. ದರೋಡೆಗೈದ ಪ್ರಕರಣವನ್ನು ೨೦ ದಿನಗಳ ಬಳಿಕ ಪೊಲೀಸರು ಭೇದಿಸಿದ್ದು, ಓರ್ವನನ್ನು ಬಂಽಸಿದ್ದಾರೆ.

ಕೇರಳದ ಕೊಲ್ಲಂ ಪೆರಿನಾಡ್ ಮಾತಿಲಿಲ್ ಮೂಲದ ಅನಿಲ್ ಫರ್ನಾಂಡಿಸ್(೪೯) ಬಂಽತ. ಆತನಿಂದ ಕೃತ್ಯಕ್ಕೆ ಬಳಸಿದ ಎರ್ಟಿಗಾ ಕಾರು, ೫ ಲಕ್ಷ ರೂ., ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್ ವಶಕ್ಕೆ ಪಡೆಯಲಾಗಿದೆ. ಸುಮಾರು ೧೧ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದ.ಕ. ಪೊಲೀಸ್ ಅಽಕ್ಷಕ ಯತೀಶ್ ಎನ್. ಆದೇಶದ ಮೇರೆಗೆ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ ಅಪರಾಧ ಪ್ರಕರಣಗಳಲ್ಲಿ ನುರಿತ ಅಽಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಪ್ರಕರಣದ ಹಿನ್ನೆಲೆ

ಬೋಳಂತೂರಿನ ಉದ್ಯಮಿಯ ಮನೆಗೆ ಜ.೩ರಂದು ರಾತ್ರಿ ಹೊತ್ತಿನಲ್ಲಿ ಇ.ಡಿ ಅಽಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು ಮನೆ ಮಂದಿಯನ್ನು ಬೆದರಿಸಿ ಹಣವನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿ ಪರಾರಿಯಾಗಿದ್ದರು. ವಶಕ್ಕೆ ಪಡೆದ ಮೊಬೈಲ್ ನೀಡದೆ ಪಲಾಯನಗೈದಿರುವುದು ಹಾಗೂ ಹಣವನ್ನು ಲೆಕ್ಕಮಾಡದೆ ತೆಗೆದುಕೊಂಡು ಹೋಗಿದ್ದರಿಂದ ಮನೆಯವರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುಮಾರು ೩೦ ಲಕ್ಷ ರೂ. ದೋಚಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.

ಇನ್ನೂ ಇಬ್ಬರು ವಶಕ್ಕೆ?

ಕೃತ್ಯದಲ್ಲಿ ಪಾಲ್ಗೊಂಡ ೬ ಮಂದಿಯ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಓರ್ವನ ಬಂಧನವನ್ನು ಪೊಲೀಸರು ದೃಢಪಡಿಸಿದ್ದು, ಉಳಿದ ಇಬ್ಬರ ವಿಚಾರಣೆ ಮುಂದುವರಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net