

ಅರಸೀಕೆರೆ ಗ್ರಾಮಾಂತರ: ಬ್ರಾಹ್ಮಣ ಸಮುದಾಯದವರು ಎಂದೂ ರಾಜ್ಯಭಾರ ಮಾಡಿಲ್ಲ. ಆದರೆ ರಾಜ್ಯಭಾರ ಮಾಡಲು ಮಾರ್ಗದರ್ಶಕರಾಗಿ ಇದ್ದುದಂತೂ ನಿಜ ಎಂದು ಕಿರುತೆರೆ ಕಲಾವಿದ ಹಾಗೂ ನಿರ್ದೇಶಕ ಎಸ್.ಎನ್.ಸೇತುರಾಮ್ ಅಭಿಪ್ರಾಯಪಟ್ಟರು.
ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ವಿಪ್ರ ನೌಕರ ಸಂಘದಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣರ ಅಪಸವ್ಯಕ್ಕೆ ಬ್ರಾಹ್ಮಣರೇ ಕಾರಣ ಎಂದರು.
ಶ್ರೀಮಂತ ಅಂಬಾನಿ ಬಗ್ಗೆ ಸಂತೋಷಪಡುವ ನಾವು ನಮ್ಮ ಕುಟುಂಬದವರು, ಬಂಧುಗಳು ಆರ್ಥಿಕವಾಗಿ ಮುನ್ನಡೆದರೆ ಸಹಿಸುವುದಿಲ್ಲ ಏಕೆ? ನಾವು ಸಂಕುಚಿತ ಭಾವನೆಗಳನ್ನು ದೂರ ಮಾಡಬೇಕು. ಅಂದು ನಾವು ಬಡವರೇ ಇಂದು ಬಡವರೇ, ಆದರೆ ಬದುಕುವ ಮಾರ್ಗವನ್ನು ಕಂಡುಕೊಂಡಿದ್ದೇವೆ ಎಂದರು.
ಇಂದಿನ ಉಡುಗೆಗಳು ಬ್ರಿಟಿಷರ ಕೊಡುಗೆ. ನಾಗರಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ. ಮಕ್ಕಳು ಓದುತ್ತಾರೆ ಬೆಂಗಳೂರು ಸೇರುತ್ತಾರೆ, ಮನೆಯಲ್ಲಿ ವೃದ್ಧರು ಮಾತ್ರ. ಇದು ಎಲ್ಲೆಡೆ ಕಾಣುವ ದೃಶ್ಯ. ಹಿಂದೆ ದೊಡ್ಡ ಕುಟುಂಬ ಇರುತ್ತಿತ್ತು, ಸಂತೋಷವಾಗಿರುತ್ತಿದ್ದರು. ಆರ್ಥಿಕ ಸಮಸ್ಯೆ ಇತ್ತು. ಈಗ ಆರ್ಥಿಕ ಸಮಸ್ಯೆ ಇಲ್ಲ, ಸಂತೋಷವೂ ಇಲ್ಲ ಎಂದು ವಿಶ್ಲೇಷಿಸಿದರು.
ನಾನು ಅರಸೀಕೆರೆಯಲ್ಲಿ ಪ್ರೌಢಶಾಲೆ ಓದಿದವನು, ನಾನು ಓದಿದ ಶಾಲೆಯನ್ನು ನೋಡಿ ಖುಷಿಯಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದೀರಿ, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ಗುರುತಿಸಿದ್ದೀರಿ. ಇಂತಹ ಕಾರ್ಯಗಳು ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳಿ,್ಳ ಬ್ರಾಹ್ಮಣರಿಗೆ ಜಾತಿ ಸರ್ಟಿಫಿಕೇಟ್ ಕೊಡಲ್ಲ. ಯಾವ ಮೀಸಲಾತಿ, ಇತರ ಸೌಲಭ್ಯ ಇಲ್ಲ. ಸರ್ವಧರ್ಮ ಸರ್ವಭಾವ ಆಗಬೇಕು. ಜಾತಿ ಜಾತಿಗಳನ್ನು ವಿಂಗಡಿಸುತ್ತಾ ಬಂದಲ್ಲಿ ಜಾತ್ಯತೀತ ರಾಷ್ಟ್ರ ಸಾಧ್ಯವೇ ಎಂದರು.
ಬ್ರಾಹ್ಮಣರು ತ್ರಿಶಂಕು ಸ್ಥಿತಿಯಲ್ಲಿ ಇದ್ದೇವೆ. ಬಿಜೆಪಿಯವರು ನಮ್ಮನ್ನು ಸ್ವೀಕರಿಸುವುದಿಲ್ಲ. ಇತರ ಪಕ್ಷಗಳು ಬ್ರಾಹ್ಮಣರು ಬಿಜೆಪಿ ಎನ್ನುತ್ತಾರೆ ಎಂದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ನಮ್ಮ ಸಮಾಜ ಅಲ್ಪ ಮತದಾರರನ್ನು ಹೊಂದಿದ್ದರೂ ಜಾತ್ಯತೀತವಾಗಿ ಅಲ್ಲಿ ನನ್ನನ್ನು ಆಶೀರ್ವದಿಸಿದರು ಎಂದು ಕ್ಷೇತ್ರದ ಜನತೆಯನ್ನು ನೆನೆದರು. ವಿಪ್ರ ನೌಕರರ ಬಳಗ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ಕನ್ಸಲ್ಟೆಂಟ್ ಕೋ ಬ್ಯಾಂಕಿಂಗ್ ಪ್ರಿನ್ಸಿಪಾಲ್ ಕಾರ್ತಿಕ್ ಎಸ್.ಬಾಪಟ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಭವಿಷ್ಯವಿಲ್ಲ. ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ರವಿಕುಮಾರ್, ವಿಪ್ರ ನೌಕರ ಬಳಗದ ಅಧ್ಯಕ್ಷ ಮೋಹನ್, ಸಂಘದ ಖಜಾಂಚಿ ಅಶೋಕ್ ನಾಡಿಗ್, ಸಂಘದ ನಿರ್ದೇಶಕ ಡಿ.ಎಸ್.ರಾಮಸ್ವಾಮಿ, ಕಾರ್ಯದರ್ಶಿ ನಾಗೇಶ್, ಸತೀಶ್ ಇತರರು ಇದ್ದರು. ಕಾರ್ಯಕ್ರಮಕ್ಕೆ ಮುನ್ನ ಬೆಂಗಳೂರಿನ ಅನಿರುದ್ಧ ರಾಮ್ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.