

ಉಡುಪಿ: ಇಂದಿನ ಅನೇಕ ಯುವಕ, ಯುವತಿಯರು ಜವಾಬ್ದಾರಿಯನ್ನು ಹೊರಲು ಮಾನಸಿಕವಾಗಿ ಸಿದ್ಧರಾಗದೇ ಇರುವುದು ವಿಚ್ಛೇದನಕ್ಕೆ ಮೂಲ ಕಾರಣ. ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಜವಾಬ್ದಾರಿಗಳನ್ನು ನಿಭಾಯಿಸಲು ಕಲಿಸಬೇಕು. ಇದರಿಂದ ಶೇ. 50ರಷ್ಟು ವಿಚ್ಛೇದನ ಪ್ರಕರಣಗಳನ್ನು ಕಡಿಮೆಗೊಳಸಬಹುದು ಎಂದು ರಾಜ್ಯ ಕಾನೂನು ವಿವಿ ಮಾಜಿ ಸಿಂಡಿಕೇಟ್ ಸದಸ್ಯೆ, ವಕೀಲೆ ಮೀರಾ ಡ್ಕೆ ಹೇಳಿದರು.
ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೈದಾನದಲ್ಲಿ ಸೇವಾ ಸಂಗಮ ಟ್ರಸ್ಟ್ ವತಿಯಿಂದ ನಡೆದ "ನಾರೀ ಶಕ್ತಿ ಸಂಗಮ' ಜಿಲ್ಲಾಮಟ್ಟದ ಮಹಿಳಾ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಂದಿನ ತಂದೆ&ತಾಯಿ ಮಕ್ಕಳಿಗೆ ಬಹಳಷ್ಟು ಸ್ವಾತಂತ್ರ ನೀಡಿ ಬೆಳೆಸುತ್ತಿದ್ದಾರೆ. ಮದುವೆ ಬಳಿಕ ಒಮ್ಮೆಲೆ ಸಂಸಾರದ ಜವಾಬ್ದಾರಿ ಹೆಗಲ ಮೇಲೆ ಬಿದ್ದಾಗ ಅದನ್ನು ನಿಭಾಯಿಸಲು ಸಾಧ್ಯವಾಗದೆ ವಿವಾಹ ಬಂಧನ ಮುರಿದು ಬೀಳುತ್ತದೆ. ಬೆಂಗಳೂರಿನಲ್ಲಿ ಸುಮಾರು 35 ಸಾವಿರ ವಿವಾಹ ವಿಚ್ಛೇದನ ಪ್ರಕರಣಗಳು ವಿಚಾರಣೆ ಹಂತದಲ್ಲಿರುವುದು ಕಳವಳಕಾರಿ ಸಂಗತಿ. ಭಾರತೀಯತೆಯ ಉಳಿವಿಗೆ ಕುಟುಂಬ ವ್ಯವಸ್ಥೆ ಬಹಳ ಮುಖ್ಯವಾಗಿದೆ. ಅವಿಭಜಿತ ದ.ಕ. ಜಿಲ್ಲೆಯ ಮಕ್ಕಳು ಚಿಕ್ಕ ಪ್ರಾಯದಲ್ಲೆ ಯಕ್ಷಗಾನ ಮುಂತಾದ ಕಲಾಪ್ರಾಕರಗಳನ್ನು ಆಭ್ಯಸುವುದರಿಂದ ಸಂಸ್ಕಾರಯುತರಾಗಿ ಬೆಳೆಯುತ್ತಿದ್ದಾರೆ ಎಂದರು.
ಪುರಾಣ, ಮಹಾಭಾರತ, ರಾಮಯಣಗಳಲ್ಲಿ ಬರುವ ಸ್ತ್ರೀಯರು ಇಂದಿನ ಪೀಳಿಗೆಗೆ ಮಾದರಿಯಾಗಿದ್ದು, ಸಂಕಷ್ಟಗಳನ್ನು ಎದುರಿಸಿ ಮುನ್ನುಗ್ಗುವ ಮನೋಬಲ ಮತ್ತು ಗಟ್ಟಿತನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೀತೆ, ಸಾವಿತ್ರಿ, ದ್ರೌಪದಿ ಭಾರತೀಯ ನಾರಿಯರ ಮೂರ್ತರೂಪದಂತಿದ್ದಾರೆ ಎಂದರು.
ಬೈಲೂರು ರಾಮಕೃಷ್ಣ ಶಾರದಾ ಆಶ್ರಮದ ಸ್ಥಾಪಕಾಧ್ಯೆ ಸುಮತಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಯೋಗ ಸಿಐಎಂಆರ್ನ ಎಚ್ಒಡಿ ವಿಭಾಗದ ಪ್ರೊ. ಅನ್ನಪೂರ್ಣಾ ಕೆ. ಆಚಾರ್ಯ, ನಾರಿಶಕ್ತಿ ಸಂಗಮ ವಿಭಾಗ ಸಂಚಾಲಕಿ ರೇಶ್ಮಾ ಯು. ಶೆಟ್ಟಿ, ಜಿಲ್ಲಾ ಸಂಚಾಲಕಿ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.