

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಕೊಂಬು ಮತ್ತು ಶಂಭೂರು ಗ್ರಾಮಗಳು ಹರ್ ಘರ್ ಜಲ್ ಗ್ರಾಮಗಳಾಗಿ ಘೋಷಣೆಯಾಗಿದೆ. (ಪ್ರತಿ ಮನೆಗೂ ಕಾರ್ಯಾತ್ಮಕ ನಲ್ಲಿ ಸಂಪರ್ಕ) ಜಲಜೀವನ್ ಮಿಷನ್ ಆಶಯದಂತೆ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, ಈಗ ಪಂಚಾಯಿತಿ ಗುರಿ ಮುಟ್ಟಿದೆ.
ನರಿಕೊಂಬು ಗ್ರಾಪಂ ಸಭಾಂಗಣದಲ್ಲಿ ಗುರುವಾರ ಹರ್ ಘರ್ ಜಲ್ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಸಲಾಯಿತು. ಗ್ರಾ ಪಂ ಅಧ್ಯಕ್ಷೆ ವಿನುತಾ ಪುರುಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು, ಪಿಡಿಒ ಶಿವಗೊಂಡಪ್ಪ ಬಿರಾದರ್, ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಫಲಾನುಭವಿಗಳ ಸಮ್ಮುಖನರಿಕೊಂಬು ಹಾಗೂ ಶಂಭೂರು ಗ್ರಾಮವನ್ನು ಹರ್ ಘರ್ ಜಲ್ ಗ್ರಾಮ ಎಂದು ಘೋಷಿಸಲಾಯಿತು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಕೆ.ನಾಯ್ಕ, ಜೆಜೆಎಂ ಅನುಷ್ಠಾನ ಬೆಂಬಲ ಸಂಸ್ಥೆ ತಂಡದ ಜಿಲ್ಲಾ ಮುಖ್ಯಸ್ಥ ಶಿವರಾಮ, ಎಚ್‌ಆರ್‌ಡಿ ಚರಣ್‌ರಾಜ್, ಇಂಜಿನಿಯರ್ ಅಶ್ವಿನ್ ಯೋಜನೆಯ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕಿರಿಯ ಅಭಿಯಂತ ಕುಶ ಕುಮಾರ್ ಕಾಮಗಾರಿಗಳ ವಿವರ ನೀಡಿದರು. ಜೆಜೆಎಂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್‌ನ ಸಿಬ್ಬಂದಿ ಗುಣವತಿ ಹಾಗೂ ವಿಲ್ಮಾ ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.