

ಬೇಲೂರು : ತಾಲೂಕು ಬಿಜೆಪಿ ಮಹಿಳಾ ಘಟಕದಿಂದ ಪಟ್ಟಣದ ಕೋಟೆ ಬಯಲು ರಂಗ ಮಂದಿರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ನಾರಿ ಶಕ್ತಿ ವಂದನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆಡಳಿತದಲ್ಲಿ ಮಹಿಳೆಯರಿಗೆ ನೀಡಿದ ಮೀಸಲಾತಿಯ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು.
ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ದೇಶದಲ್ಲಿ ಮಹಿಳೆಯರ ಸಬಲೀಕರಣ ಆಗಬೇಕು, ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸವನ್ನು ವಿಶ್ವವೇ ಕೊಂಡಾಡುತ್ತಿದೆ. ದೇಶದಲ್ಲಿ ಎಲ್ಲ ಸಮುದಾಯವನ್ನೂ ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಪ್ರಧಾನಿ ಮಾಡುತಿದ್ದಾರೆ. ಮಹಿಳೆಯರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ದೇಶದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸ್ವಯಂ ಉದ್ಯೋಗದೊಂದಿಗೆ ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಲು ಅನೇಕ ಯೋಜನೆ ಲಭ್ಯವಿದೆ. ಉಜ್ವಲ ಯೋಜನೆ, ಮಹಿಳಾ ಸ್ವಸಹಾಯ ಸಂಘಕ್ಕೆ ನೆರವು, ಹೊಸದಾಗಿ ಆರಂಭವಾಗಿರುವ ವಿಶ್ವ ಕರ್ಮ ಪ್ರಧಾನಿ ಯೋಜನೆಯಡಿಯಲ್ಲಿ ಬೃಹತ್ ಮೊತ್ತದ ಸಾಲ ವಿತರಣೆ, ಆರೋಗ್ಯ ಕಾರ್ಡ್, ಗೃಹ ಯೋಜನೆ ಇನ್ನಿತರೆ ಯೋಜನೆಗಳನ್ನು ಮಹಿಳೆಯರಿಗಾಗಿ ಪ್ರಧಾನಿ ತಂದಿದ್ದಾರೆ. ಆದ್ದರಿಂದ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮಹಿಳಾ ಶಕ್ತಿಗಳು ಶ್ರಮಿಸಬೇಕಿದೆ ಎಂದರು.
ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಗಣೇಶ್ ಮಾತನಾಡಿ, ಮಹಿಳೆಯರ ಸಭಲೀಕರಣಕ್ಕಾಗಿ ಪ್ರಧಾನಿಯವರು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭ ಸಾಹಿತಿ ಇಂದಿರಮ್ಮ ಹಾಗೂ ಮಹಿಳಾ ಸ್ವ ಸಹಾಯ ಸಂಘದ ವ್ಯವಸ್ಥಾಪಕಿ ಭಾರತೀಗೌಡ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು.