ಮೋದಿ ಇಚ್ಛಾಶಕ್ತಿಯಿಂದ ನಾರಿ ಶಕ್ತಿ ಮಸೂದೆ ಅಂಗೀಕಾರ: ಬಿವೈಆರ್

b y raghavendra
ಸಂಸತ್‌ನಲ್ಲಿ ನಾರಿ ಶಕ್ತಿ ವಂದನಾ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ನಗರ ಪಾಲಿಕೆ ಸದಸ್ಯರಾದ ಸುರೇಖಾ ಮರುಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್ ಮುಂತಾದವರು ಅಭಿನಂದಿಸಿದರು. ಟಿ.ಡಿ.ಮೇಘರಾಜ್, ಜಗದೀಶ್, ವಿಶ್ವಾಸ್ ಮುಂತಾದವರಿದ್ದರು.
Published on

ಶಿವಮೊಗ್ಗ: ದೂರದೃಷ್ಟಿ ಇದ್ದರೆ ಓರ್ವ ನಾಯಕ ಉತ್ತಮ ಕಾರ್ಯ ಮಾಡಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿದರ್ಶನ. ಅವರ ಇಚ್ಛಾಶಕ್ತಿ ಪರಿಣಾಮವಾಗಿ ಸಂಸತ್ ಉಭಯ ಸದನಗಳಲ್ಲಿ ನಾರಿ ಶಕ್ತಿ ವಂದನಾ ಮಸೂದೆ ಅಂಗೀಕಾರವಾಗಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಕಾಯ್ದೆ ರೂಪ ಸಿಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ವಾಜಪೇಯಿ ಪ್ರಧಾನಿ ಆಗಿದ್ದಾಗ ಮಹಿಳೆಯರಿಗೆ ವಿಧಾನ ಮಂಡಲ ಹಾಗೂ ಸಂಸತ್‌ನಲ್ಲಿ ಶೇ.33 ಮೀಸಲಾತಿ ನೀಡಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಅಂತಹ ಪ್ರಯತ್ನ ನಡೆದಿದ್ದರೂ ಅವರ ಮೈತ್ರಿಕೂಟದ ಮಿತ್ರಪಕ್ಷಗಳೇ ಸಹಕಾರ ನೀಡಲಿಲ್ಲ. ಈಗ ಪ್ರಧಾನಿ ಮೋದಿ ಹಲವು ದಶಕಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ. ತ್ರಿವಳಿ ತಲಾಖ್ ರದ್ದತಿ ಮೂಲಕ ಸಾಮಾಜಿಕ ಪಿಡುಗು ದೂರ ಮಾಡಿದ್ದ ಮೋದಿ, ಈಗ ಮಹಿಳೆಯರ ಸಬಲೀಕರಣಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳಾ ಮತದಾರರ ಸಂಖ್ಯೆ ಹಲವು ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಚ್ಚಿದೆ. ಹೀಗಾಗಿ ಅವರಿಗೆ ಶೇ.33 ಮೀಸಲಾತಿ ನೀಡಬೇಕೆಂಬುದು ಹಲವು ವರ್ಷಗಳ ಆಗ್ರಹವಾಗಿತ್ತು. ಈಗ ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಕೆಲ ವರ್ಷ ಬೇಕು. ಅಲ್ಲಿಯವರೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಟ್ಟಾರೆ ಈ ಬಾರಿಯ ಸಂಸತ್‌ನ ವಿಶೇಷ ಅಧಿವೇಶನ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಹಿಂದಿನ ಸಂಸತ್ ಭವನ ಹಾಗೂ ಹೊಸ ಸಂಸತ್ ಭವನದಲ್ಲಿ ನಡೆದ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶವನ್ನು ಜನತೆ ಕಲ್ಪಿಸಿರುವುದು ನನ್ನ ಅದೃಷ್ಟ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಕಾರ್ಯದರ್ಶಿ ಪದ್ಮಿನಿ, ನಗರ ಪಾಲಿಕೆ ಸದಸ್ಯರಾದ ಇ.ವಿಶ್ವಾಸ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಹೃಷಿಕೇಷ್ ಪೈ ಇತರರಿದ್ದರು.
ಕಾವೇರಿಗೇಕೆ ಮೋದಿ ನಂಟು?: ತಮಿಳುನಾಡು ಕೇಳುವುದಕ್ಕೂ ಮುನ್ನವೇ ಕಾವೇರಿ ನೀರು ಹರಿಸಿ ಕಾವೇರಿ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ರಾಜ್ಯ ಸರ್ಕಾರ ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ಕರೆದಿದ್ದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸದೆ, ನ್ಯಾಯಾಧಿಕರಣಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡದೆ ಈಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವುದು ವಿಪರ್ಯಾಸ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರಿಗೆ ಎಲ್ಲದಕ್ಕೂ ಪ್ರಧಾನಿ ಮೋದಿಯನ್ನು ದೂಷಿಸುವ ಹವ್ಯಾಸ. ಈಗ ಕಾವೇರಿಗೂ ಮೋದಿ ಹೆಸರನ್ನು ನಂಟು ಹಾಕುತ್ತಿದ್ದಾರೆ. ತಮಿಳುನಾಡಿನಲ್ಲಿ ಅವರದ್ದೇ ಮೈತ್ರಿಕೂಟದ ಎಂ.ಕೆ.ಸ್ಟಾಲಿನ್ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಾಲಿನ್ ಜತೆ ಚರ್ಚಿಸಿ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದರು.
ವಿಐಎಸ್‌ಎಲ್ ಶತಮಾನೋತ್ಸವ: ಭದ್ರಾವತಿ ವಿಐಎಸ್‌ಎಲ್ ಶತಮಾನೋತ್ಸವ ನವೆಂಬರ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ನಟ ದೊಡ್ಡಣ್ಣ ನೇತೃತ್ವದಲ್ಲಿ ಅನೇಕ ನಿವೃತ್ತ ಹಿರಿಯ ಅಧಿಕಾರಿಗಳ ಸಮಿತಿ ರಚನೆಯಾಗಿದೆ. ಈ ತಂಡವನ್ನು ಕರೆದೊಯ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿಸಿದ್ದೇನೆ. ಶತಮಾನೋತ್ಸವಕ್ಕೆ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಮೈಸೂರಿನ ರಾಜವಂಶಸ್ಥ ಯದುವೀರ ಒಡೆಯರ್ ಅವರನ್ನು ಕರೆಸಲು ತೀರ್ಮಾನಿಸಲಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net