

ಮಳವಳ್ಳಿ: ಮಹಿಳೆಯರು ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ಜ್ಞಾನ ವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಫೌಂಡೇಷನ್ ಒಕ್ಕೂಟದ ನಿರ್ದೇಶಕಿ ಅರುಣಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ವಿಜೇತರನ್ನು ಪಟ್ಟಣದ ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಫೌಂಡೇಷನ್ ಸಹಯೋಗದಲ್ಲಿ ಸಂಘದ ಕಚೇರಿಯಲ್ಲಿ ಶುಕ್ರವಾರ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಟಿವಿ ಧಾರಾವಾಹಿಗಳ ವ್ಯಾಮೋಹ ಹೆಚ್ಚಾಗಿದ್ದು, ಮಕ್ಕಳ ಬೆಳವಣಿಗೆಯಲ್ಲಾಗುತ್ತಿರುವ ಬದಲಾವಣೆ ಬಗ್ಗೆ ನಿಗಾ ವಹಿಸುವುದು ಕಡಿಮೆಯಾಗುತ್ತಿದೆ. ಈ ಕೆಟ್ಟ ಬೆಳವಣಿಗೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೂಲಕ ಕುಟುಂಬದ ನೆಮ್ಮದಿಯ ವಾತಾವರಣವೇ ಹಾಳಾಗುತ್ತಿದೆ. ಇದೊಂದು ರೀತಿಯ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಫೌಂಡೇಷನ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮಾತನಾಡಿ, ವಿಜಯವಾಣಿ ದಿನಪತ್ರಿಕೆ ದಶಕಗಳಿಂದ ಸಮಾಜಮುಖಿ ಕಾರ್ಯಗಳ ಜತೆಗೆ ಎಲ್ಲ ವರ್ಗದವರಲ್ಲೂ ಚಿಂತನೆಗಳನ್ನು ಹುಟ್ಟು ಹಾಕುವಂತಹ ಪ್ರಯೋಗಾತ್ಮಕ ವಿಚಾರಗಳನ್ನು ತುಂಬಿ ಪತ್ರಿಕೆಯನ್ನು ಓದುಗರ ಕೈ ಸೇರಿಸುತ್ತಿರುವುದು ಪ್ರಶಂಸನೀಯ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿಮಿತ್ರ ಹೊರತರುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಇದು ಪ್ರಮುಖ ಕೈಪಿಡಿಯಾಗಿದೆ. ಗ್ರಾಮೀಣ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಮ್ಮ ಸಂಸ್ಥೆ ವತಿಯಿಂದ ಕಳೆದ ಶೈಕ್ಷಣಿಕ ಅವಧಿಯಲ್ಲಿ ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ 700ಕ್ಕೂ ಹೆಚ್ಚು ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಪೂರೈಸಿದ್ದೇವೆ ಎಂದರು.
ಫೌಂಡೇಷನ್ ಒಕ್ಕೂಟದ ನಿರ್ದೇಶಕಿಯರಾದ ಮೇರಿ, ರಾಜಮ್ಮ, ಗೌರಮ್ಮ, ಸೌಖತ್ ಉನ್ನೀಸಾ, ಶಾರದಾ, ಸರೋಜಮ್ಮ, ರೇಣುಕಾ, ಮೀನಾಕ್ಷಿ ಇದ್ದರು.
ಮಳವಳ್ಳಿ ತಾಲೂಕಿನಲ್ಲಿ ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ನಾರಿ ನಿನಗೊಂದು ಸ್ಯಾರಿ ಕೂಪನ್‌ಗಳನ್ನು ಸಾವಿರಾರು ಸ್ಪರ್ಧಿಗಳು ಕಳುಹಿಸಿದ್ದರು. ಅಖಿಲಾ ಜೆ.ಕೆ.ಮಳವಳ್ಳಿ, ಬಿ.ಆರ್.ನಳಿನಿ ಬೆಳಕವಾಡಿ, ಇಂದ್ರಾಣಿ ನೇಣನೂರು, ನಾಗರತ್ನಾ ಬಾಳೆಹೊನ್ನಿಗ, ಹೇಮಲತಾ ಪೂರಿಗಾಲಿ ವಿಜೇತರು.