‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಅದೃಷ್ಟಶಾಲಿ ನಾರಿಯರಿಗೆ ಸೀರೆ ವಿತರಣೆ

DSC_4453
Published on

ಮೈಸೂರು: ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾಗಿದ್ದ ಅದೃಷ್ಟಶಾಲಿಗಳಿಗೆ ನಗರದ ಶ್ರೀಹರ್ಷ ರಸ್ತೆಯ ಸುಮಂಗಲಿ ಸಿಲ್ಕ್ಸ್ ಮಳಿಗೆಯಲ್ಲಿ ಭಾನುವಾರ ಸೀರೆ ವಿತರಿಸಲಾಯಿತು.

ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 20 ಅದೃಷ್ಟಶಾಲಿಗಳು ಸ್ಯಾರಿ ಪಡೆದುಕೊಂಡರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಟಾ ಅಮರ್‌ನಾಥ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಟ ಬಲರಾಜವಾಡಿ, ಸುಮಂಗಲಿ ಸಿಲ್ಕ್ಸ್ ಪಾಲುದಾರರಾದ ಶ್ರದ್ಧಾ ಶ್ರೀರಾಮ್, ರೂಪದರ್ಶಿ ತನಿಷ್ಕಾ ಮೂರ್ತಿ, ‘ವಿಜಯವಾಣಿ’ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ, ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಕೆ ಸೀರೆ ವಿತರಿಸಿದರು.

ಮಹಿಳೆಯರಲ್ಲಿ ಪತ್ರಿಕೆ ಓದುವ ಹವ್ಯಾಸದ ಜತೆಗೆ, ಸಾಮಾನ್ಯ ಜ್ಞಾನ ವೃದ್ಧಿಸುವ ಉದ್ದೇಶದಿಂದ ಕಳೆದ ಆಗಸ್ಟ್ 15ರಿಂದ ಸೆಪ್ಟೆಂಬರ್ 30ರವರೆಗೆ ಒಟ್ಟು 45 ದಿನಗಳ ಕಾಲ ‘ವಿಜಯವಾಣಿ’ ವತಿಯಿಂದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ನಡೆದ ಈ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು. ಹೀಗಾಗಿ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5ರಿಂದ 6 ಸಾವಿರದಷ್ಟು ಪ್ರವೇಶಗಳು ಬಂದಿದ್ದವು. ಸುತ್ತಮುತ್ತಲ ಪ್ರದೇಶದ ಜತೆಗೆ ದೇಶ, ವಿದೇಶದ ವಿದ್ಯಮಾನಗಳನ್ನು ಪರಿಚಯಿಸುವುದು, ದಿನನಿತ್ಯದ ಆಗುಹೋಗುಗಳನ್ನು ತಿಳಿದುಕೊಂಡು ಪತ್ರಿಕೆ ಓದುವಂತೆ ಮಾಡುವುದು ಸ್ಪರ್ಧೆಯ ಉದ್ದೇಶವಾಗಿತ್ತು. ಲಕ್ಕಿ ಡಿಪ್ ಮೂಲಕ ಇತ್ತೀಚೆಗೆ ಅದೃಷ್ಟಶಾಲಿಗಳ ಆಯ್ಕೆ ನಡೆದಿತ್ತು.

ಜ್ಞಾನದ ಜತೆ ಸಂಸ್ಕಾರ: ಕೆ.ಎಂ.ಗಾಯತ್ರಿ

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಓದು ನಮ್ಮ ಜ್ಞಾನ ಹೆಚ್ಚಿಸುವ ಜತೆಗೆ ಸಂಸ್ಕಾರ ಕೊಡುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಓದು ಮುಖ್ಯ. ಮಹಿಳೆಯರ ಸಬಲೀಕರಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯ ಕಾರ್ಯಕ್ರಮಗಳಿಂದ ಮಹಿಳೆಯರು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ನಿತ್ಯವೂ ದಿನಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದರು.

ವಿಜಯವಾಣಿ ನಂ.1 ಸ್ಥಾನದಲ್ಲಿ ಇದೆ. ಜಗತ್ತಿನ ಹೆಚ್ಚು ವಿಚಾರಗಳನ್ನು ಪ್ರಕಟಿಸುತ್ತಿದೆ. ಪತ್ರಿಕೆಗಳನ್ನು ಹೆಚ್ಚಾಗಿ ಓದುವುದರಿಂದ ಜ್ಞಾನವೂ ಹೆಚ್ಚಾಗುತ್ತದೆ. ಹಾಗಾಗಿ, ಮಹಿಳೆಯರು ನಿತ್ಯ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಹೊಸದಾಗಿ ಯಾವ ವಸ್ತು ಬಂದಿದೆ, ಹಳೆಯದು ಏನಾಗಿದೆ, ಮಕ್ಕಳನ್ನು ಹೇಗೆ ಬೆಳೆಸಬೇಕು, ಏನು ಕಲಿಸಬೇಕು ಎನ್ನುವುದನ್ನು ಕಲಿಯಬಹುದಾಗಿದೆ ಎಂದು ತಿಳಿಸಿದರು.

ದಿನಪತ್ರಿಕೆ ಓದಿನಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಪತ್ರಿಕೆಗಳಲ್ಲಿ ಬರುವ ಪ್ರಚಲಿತ ವಿದ್ಯಮಾನಗಳನ್ನು ಓದಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದೆ ಎಂದು ಸ್ಮರಿಸಿದರು.
ಇಂದಿನ ಮಕ್ಕಳು ಮೊಬೈಲ್‌ಗೆ ಜೋತು ಬಿದ್ದಿರುವುದನ್ನು ತಪ್ಪಿಸಲು ಪತ್ರಿಯೊಬ್ಬರೂ ಮನೆಗೆ ಪತ್ರಿಕೆಗಳನ್ನು ತರಿಸಬೇಕು. ಮಕ್ಕಳಿಗೂ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.

ಓದುಗರ ರಾಯಭಾರಿಗಳು: ಬಲರಾಜವಾಡಿ

ನಟ ಬಲರಾಜವಾಡಿ ಮಾತನಾಡಿ, ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮದ ವಿಜೇತರು ಹೊಸ ಓದುಗರ ರಾಯಭಾರಿಗಳಾಗಿದ್ದಾರೆ. ನಿಮಗೆ ಬಹುಮಾನವಾಗಿ ನೀಡುವ ಸ್ಯಾರಿಗಳನ್ನು ನಿಮ್ಮ ಅಕ್ಕಪಕ್ಕದ ಮನೆಯ ಮಹಿಳೆಯರಿಗೂ ತೋರಿಸುವ ಮೂಲಕ, ಅವರೂ ಪತ್ರಿಕೆಗಳನ್ನು ಓದುವಂತೆ ಪ್ರೇರೇಪಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುಂಬ ಸಂತೋಷವಾಗಿದೆ. ಓದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ವಿಜಯವಾಣಿ ಪತ್ರಿಕೆ ಈ ಮೂಲಕ ಜನರಲ್ಲಿ ಓದುವ ಸಂಸ್ಕೃತಿ ಹೆಚ್ಚಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳ ತಾಳ್ಮೆ ಗೊತ್ತಾಗುವುದು ಬಟ್ಟೆ ಅಂಗಡಿಯಲ್ಲಿ. ತಾಳ್ಮೆಯ ತಾಯಂದಿರು ಇರುವುದರಿಂದ ಭಾರತ ದೇಶಕ್ಕೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗಿಲ್ಲ ಎಂದರು.

ಪತ್ರಿಕೆ ಜ್ಞಾನ ಹೆಚ್ಚಿಸಲಿದೆ: ಡಾ.ಪುಷ್ಪಾ ಅಮರ್‌ನಾಥ್

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಮಾತನಾಡಿ, ವಿಜಯವಾಣಿ ಪತ್ರಿಕೆ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ನೀಡಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಆಯೋಜನೆ ಮಾಡಿರುವುದು ಸಂತಸದ ವಿಷಯ. ಇದರಿಂದ ಮಹಿಳೆಯರು ನಿತ್ಯವೂ ಪತ್ರಿಕೆ ಓದಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ ಎಂದರು.

ಗೃಹಿಣಿಯರೆಂದರೆ ಅಡುಗೆ ಮನೆಗೆ ಸೀಮಿತ ಎಂಬ ಸಂಪ್ರದಾಯವಿದೆ. ಅದನ್ನು ಮೀರಿ ಮಹಿಳೆಯರು ಬೆಳೆಯಬೇಕು. ಮಹಿಳೆಯರನ್ನು ಪ್ರೋತ್ಸಾಹಿಸಲು ವಿಜಯವಾಣಿ ಇಂತಹ ಕಾರ್ಯಕ್ರಮ ಆಯೋಜಿಸಿದೆ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಭಾಗವಹಿಸಿರುವುದನ್ನು ನೋಡಿ ಖುಷಿಯಾಗಿದೆ. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರು ಮನೆಗೆ ಮಾತ್ರ ಸೀಮಿತರಲ್ಲ. ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ರೂಪದರ್ಶಿ ತನಿಷ್ಕಾ ಮೂರ್ತಿ ಮಾತನಾಡಿ, ನಾನು ಕೂಡ ಲಕ್ಕಿ ಡಿಪ್‌ನಲ್ಲಿ ಒಂದು ಸ್ಕೂಟರ್ ವಿನ್ ಆಗಿದ್ದೆ. ಹಾಗಾಗಿ, ಲಕ್ಕಿ ಡಿಪ್ ಎಂದರೆ ನನಗೆ ಅದೇ ನೆನಪಾಗುತ್ತದೆ. ಲಕ್ಕಿ ಡಿಪ್‌ನಲ್ಲಿ ವಿನ್ ಆಗುವವರು ನಿಜವಾಗಿಯೂ ಲಕ್ಕಿ ಮಹಿಳೆಯರು. ವಿಜಯವಾಣಿ ಪತ್ರಿಕೆ ಮಹಿಳೆಯರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದಕ್ಕೆ ಸುಮಂಗಲಿ ಸಿಲ್ಕ್ಸ್ ಸಹಕಾರ ನೀಡಿರುವುದನ್ನು ಮೆಚ್ಚಬೇಕು ಎಂದರು.

ಸ್ಯಾರಿ ವಿಜೇತರು

ಡಿ.ಬಿ.ಪ್ರಿಯದರ್ಶಿನಿ, ಬಿ.ಎ.ಲೋಕೇಶ್ವರಿ, ಶಿವಪುತ್ರಮ್ಮ, ಕವಿತಾ, ಲಕ್ಷ್ಮೀ, ಎಂ.ಮೀರಾಬಾಯಿ, ಭಾಗ್ಯಲಕ್ಷ್ಮೀ, ಕೆ.ಪಿ.ಚಂದ್ರಿಕಾ, ಗೀತಾ ಸುಂದರಮೂರ್ತಿ, ಬಿ.ಆರ್.ವೀಣಾ, ಎನ್.ಜಿ.ಲತಾ, ಎಸ್.ಜ್ಯೋತಿ, ರೂಪಾ ಮಹೇಶ, ಎಂ.ಎನ್.ಯೋಗೇಶ್ವರಿ, ಸವಿತಾ ಪ್ರಸನ್ನ, ಸುಜಯಾ ಸಿಂಹ, ವಿಜಯಲಕ್ಷ್ಮೀ, ಅನಿತಾ, ಪೂಜಾ ಶಿರಾಲಿ, ಪಿ.ಎಸ್.ಶಿಲ್ಪಶ್ರೀ ಲಕ್ಕಿ ಡಿಪ್ ಸ್ಯಾರಿ ವಿಜೇತರು.

ಎರಡನೇ ಬಾರಿ ವಿಜೇತರು

ಕುವೆಂಪುನಗರದ ಸುಜಯಾ ಸಿಂಹ ಎರಡನೇ ಬಾರಿಗೆ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಲಕ್ಕಿ ಡಿಪ್ ವಿಜೇತರಾಗಿ ಸ್ಯಾರಿ ಪಡೆದರು. ಕಳೆದ ವರ್ಷ ಸ್ಪರ್ಧೆಯಲ್ಲಿ ಗೆದ್ದಿದ್ದ ಸ್ಯಾರಿಯನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಗಮನ ಸೆಳೆದರು. ‘ಎರಡನೇ ವರ್ಷವೂ ಸ್ಪರ್ಧೆಯಲ್ಲಿ ವಿಜೇತರಾಗಿರುವುದಕ್ಕೆ ಖುಷಿಯಾಗಿದೆ. ನಮ್ಮ ಮನೆಯಲ್ಲಿ 10 ವರ್ಷಗಳಿಂದ ವಿಜಯವಾಣಿ ಓದುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳ ಮೂಲಕ ವಿಜಯವಾಣಿ ಜನಸಾಮಾನ್ಯರ ಮನ ಗೆದ್ದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಉತ್ತಮ ಸೇವೆ ನೀಡಬೇಕು ಹಾಗೂ ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡಬೇಕು ಎನ್ನುವುದು ನಮ್ಮ ಉದ್ದೇಶ. ಹಾಗಾಗಿ, ಇಂತಹ ಕಾರ್ಯಕ್ರಮಕ್ಕೆ ಎಷ್ಟು ಬೇಕಾದರೂ ಸಹಕಾರ ನೀಡುತ್ತೇವೆ.ಶ್ರದ್ಧಾ ಶ್ರೀರಾಮ್, ಸುಮಂಗಲಿ ಸಿಲ್ಕ್ಸ್ ಪಾಲುದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net