ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

24ark1
Published on

ಅರಕಲಗೂಡು: ವಿದ್ಯಾರ್ಥಿಗಳು ಮೊಬೈಲ್ ಬಳಕೆ ತಗ್ಗಿಸಿ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆಗೆ ಬಹುದೊಡ್ಡ ಸಾಧನವಾಗಲಿದೆ ಎಂದು ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಎಚ್.ಎಸ್. ರಶ್ಮಿ ತಿಳಿಸಿದರು.

ಪಟ್ಟಣದ ಬಿಜಿಎಸ್ ಕಾಲೇಜಿನಲ್ಲಿ ಶುಕ್ರವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಮ್ಮಿಕೊಂಡಿದ್ದ ‘ನಾರಿ ನಿನಗೊಂದು ಸ್ಯಾರಿ’ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿಗಳ ಆಯ್ಕೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳಿಸಿಕೊಳ್ಳಬೇಕು. ಇದರಿಂದ ದೇಶದ ಪ್ರಮುಖ ವಿಚಾರಗಳು ಹಾಗೂ ಜ್ಞಾನ ಸಂಪಾದನೆಗೆ ಸಹಕಾರಿಯಾಗಲಿದೆ. ಮನೆಗಳಿಗೆ ದಿನಪತ್ರಿಕೆ ತರಿಸುವಂತೆ ವಿದ್ಯಾರ್ಥಿಗಳು ಪಾಲಕರ ಮನವೊಲಿಸಬೇಕೆಂದು ಸಲಹೆ ನೀಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ಮಾತನಾಡಿ, ದಿನಪತ್ರಿಕೆಗಳನ್ನು ಓದುವುದರಿಂದ ಅಕ್ಷರ ಜ್ಞಾನದ ಜತೆಗೆ ದೇಶದ ಎಲ್ಲ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಮಹಿಳೆಯರನ್ನು ಓದುಗರ ಬಳಗಕ್ಕೆ ಸೆಳೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಡಿಪಿಒ ವೆಂಕಟೇಶ್ ಮಾತನಾಡಿ, ಯುವ ಸಮೂಹ ಪ್ರಶ್ನೆ ಮಾಡುವ ಗುಣ ಹೊಂದಬೇಕು. ದಿನಪತ್ರಿಕೆ ಓದುವುದರಿಂದ ಏಕಾಗ್ರತೆ ಹೆಚ್ಚುವುದರ ಜತೆಗೆ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಪ.ಪಂ. ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಸಮಾಜ ತಿದ್ದುವ ಕೆಲಸದಲ್ಲಿ ಮಾಧ್ಯಮ ರಂಗ ಪ್ರಮುಖ ಪಾತ್ರ ವಹಿಸುತ್ತದೆ. ದಿನಪತ್ರಿಕೆ ಓದುವುದರಿಂದ ನಾಡಿನ ಜ್ಞಾನ ಪಡೆಯಬಹುದಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಚ್.ಸಿ. ಲೋಕೇಶ್‌ಗೌಡ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲೇ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ, ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುವುದರ ಜತೆಗೆ ಭವಿಷ್ಯದಲ್ಲಿ ಉನ್ನತ ಸ್ಥಾನ ಗಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರಾಂಶುಪಾಲ ಮಹೇಶ್ ಹೊಡೆನೂರು ಮಾತನಾಡಿ, ವಿದ್ಯಾರ್ಥಿಗಳು ದಿನಕ್ಕೆ ಹತ್ತು ನಿಮಿಷವಾದರೂ ದಿನಪತ್ರಿಕೆಗಳನ್ನು ಓದಲು ಸಮಯ ಮೀಸಲಿಡಬೇಕು. ದಿನಪತ್ರಿಕೆ ಮಹಿಳೆಯರಿಗೆ ಲೋಕಜ್ಞಾನ ತಿಳಿಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವರದಿಗಾರ ರಮೇಶ್ ಹಂಡ್ರಂಗಿ, ವಿದ್ಯಾರ್ಥಿಗಳು, ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net