ದಿನಪತ್ರಿಕೆ ಓದುವ ಹವ್ಯಾಸ ಇಳಿಕೆ

IMG-20231124-WA0126
Published on

ಸಕಲೇಶಪುರ: ಮಹಿಳೆಯರು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ ಎಂದು ಆಕಾಶವಾಣಿ ಉದ್ಘೋಷಕಿ ಸುಜಲಾ ದೇವಿ ಹೇಳಿದರು.

ತಾಲೂಕಿನ ಯಡವರಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ‘ನಾರಿ ನಿನಗೊಂದು ಸ್ಯಾರಿ’ ಲಕ್ಕಿ ಡ್ರಾ ಅದೃಷ್ಟಶಾಲಿಗಳ ಆಯ್ಕೆಗೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಬದಲಿಗೆ ಬದುಕಿಗೆ ಯಾವುದೇ ಅರ್ಥ ನೀಡದ ಧಾರಾವಾಹಿಗಳನ್ನು ವೀಕ್ಷಿಸುವ ಮೂಲಕ ದಿನ ಕಳೆಯುತ್ತಿದ್ದಾರೆ. ಇದನ್ನು ಗಮನಿಸುವ ಮನೆಯ ಕಿರಿಯ ಸದಸ್ಯರು ಸಹ ಇದೇ ದಾರಿಯಲ್ಲಿ ಸಾಗುವುದರಿಂದ ಸಮಾಜ ಹಾಗೂ ಕುಟುಂಬಕ್ಕೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗಕ್ಕೆ ಪತ್ರಿಕೆಗಳು ತಲುಪುತ್ತಿಲ್ಲ. ಪರಿಣಾಮ ಗ್ರಾಮೀಣ ವಿದ್ಯಾರ್ಥಿಗಳು ಲೋಕಜ್ಞಾನದ ಕೊರತೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಟ್ಟಣದ ವಿದ್ಯಾರ್ಥಿಗಳಿಗಿಂತ ಹಿಂದುಳಿದಿದ್ದಾರೆ. ಆದ್ದರಿಂದ ಸ್ತ್ರೀ ಶಕ್ತಿ ಸಂಘಗಳು ತಮ್ಮ ಸದಸ್ಯರಿಗೆ ದಿನಪತ್ರಿಕೆಗಳನ್ನು ಪೂರೈಸುವ ಮೂಲಕ ಓದುವ ಹವ್ಯಾಸ ಬೆಳೆಸಬೇಕು ಎಂದರು.
ವಿಜಯವಾಣಿ ಮೈಸೂರು ಬ್ಯುರೋ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ಮುಖ್ಯಸ್ಥ ದೀಪಕ್ ಘಾಟ್ಕೆ, ಧರ್ಮಸ್ಥಳ ಸಂಘದ ಮುಖ್ಯಸ್ಥೆ ಸ್ವಾತಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net