ದಿವ್ಯ ಮಂಗಳ ವಿಗ್ರಹಗಳ ಮಹೋತ್ಸವ ಇಂದು

dj clk narahari
Published on

ಚಳ್ಳಕೆರೆ: ಇಲ್ಲಿನ ನರಹರಿ ನಗರದಲ್ಲಿನ ನರಹರೇಶ್ವರ ದೇವಾಲಯ ಪ್ರಾಂಗಣದಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿರುವ ದಿವ್ಯ ಮಂಗಳ ವಿಗ್ರಹಗಳ ಮಹೋತ್ಸವ ಕಾರ್ಯಕ್ಕೆ ಶನಿವಾರ ಪೂಜಾ ಕಾರ್ಯಕ್ರಮಗಳೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಗ್ರಾಮ ದೇವರಾದ ವೀರಭದ್ರೇಶ್ವರ ಸ್ವಾಮಿಗೆ ವಾಸವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಗಳನ್ನು ನರಹರಿ ನಗರಕ್ಕೆ ಕೊಂಡೊಯ್ಯಲಾಯಿತು.

ನರಹರಿ ಸದ್ಗುರು ಸಂಪ್ರದಾಯ ಪೀಠಾಧ್ಯಕ್ಷ ಡಾ.ರಾಜರಾಮ್ ಸ್ವಾಮೀಜಿ ಮಾತನಾಡಿ, ಭಾರತೀಯ ಧಾರ್ಮಿಕ ನಂಬಿಕೆ ಉಳಿಯಬೇಕು. ಇಲ್ಲಿ ಸನ್ಯಾಸಿ ಜತೆ ಗೃಹಸ್ಥನೂ ಮುಕ್ತಿ ಮಾರ್ಗ ಕಂಡುಕೊಳ್ಳಬಹುದು.

ಅಂತಹ ದೂರ ಚಿಂತನೆಯಲ್ಲಿ ಜಾತಿ, ವರ್ಗ ಬೇಧ ಮರೆತು 200 ವರ್ಷಗಳ ಕಾಲಮಾನದ ನರಹರಿ ಸದ್ಗುರು ಸ್ವಾಮೀಜಿಗಳು ಅನುಸರಿಸಿರುವ ಗೃಹಸ್ಥ ಸಂಪ್ರದಾಯ ಆಧ್ಯಾತ್ಮಿಕ ಸೇವಾ ಕಾರ್ಯ ನಡೆಸಲಾಗುತ್ತಿದೆ ಎಂದರು.

ಈ ಪರಂಪರೆ ಅನುಸರಣೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಲಕ್ಷ್ಮಿನರಸಿಂಹ ಸದ್ಗುರು ಸ್ವಾಮೀಜಿ, ಸಿಂಹಾದ್ರಿ ಸದ್ಗುರು ಸ್ವಾಮೀಜಿ, ಮಾತೃಶ್ರೀ ನಾಗವೇಣಿ ಅಮ್ಮನವರ ವಿಗ್ರಹಗಳ ಅನಾವರಣ ಕಾರ್ಯ ನಡೆಸಲಾಗುತ್ತಿದೆ.

ಲೋಕ ಮತ್ತು ಬದುಕಿನ ನಡುವೆ ತನ್ನನ್ನು ತಾನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ರಾಜೇಶ್ವರಿ, ರಘುರಾಮ ಶಾಸ್ತ್ರಿ, ಜ್ಯೋತಿ, ಏಕಾಂತರಾಮಶಾಸ್ತ್ರಿ, ಲಲಿತಮ್ಮ, ಡಾ.ನರಹರಿ, ಪದ್ಮಾಶ್ರೀ, ಲಾವಣ್ಯ, ಬಿ.ಸಿ.ಸಂಜೀವಮೂರ್ತಿ, ಬಿ.ಸಿ.ಸತೀಶ್‌ಕುಮಾರ್, ಚೇತನ್, ರವಿಪ್ರಸಾದ್, ದಿನೇಶ್‌ರೆಡ್ಡಿ, ಬಿ.ವಿ.ಚಿದಾನಂದಮೂರ್ತಿ ಇತರರು ಪಾಲ್ಗೊಂಡಿದ್ದರು.

ಭಾನುವಾರ ಬೆಳಗ್ಗೆ 6.30ಕ್ಕೆ ಸಾಮೂಹಿಕ ಪ್ರಾಣಾಯಾಮ, ಸುಪ್ರಭಾತ, ಪ್ರಾರ್ಥನೆ, ಪುಣ್ಯಾಹವಾಚನ, ರುದ್ರಾಭಿಷೇಕ, ಗಣ ಹೋಮ, ನವಗ್ರಹ ವಾಸ್ತುಹೋಮ, ಸಾಮೂಹಿಕ ಗುರುಮಾನ ಮಂತ್ರ, ಪೂರ್ಣಾಹುತಿ ಬಳಿಕ 10 ಗಂಟೆಗೆ ಶಂಕು ಸ್ಥಾಪನೆ ಮತ್ತು ದಿವ್ಯ ಮಂಗಳ ವಿಗ್ರಹಗಳ ಅನಾವರಣ ಕಾರ್ಯ ನಡೆಯಲಿದೆ.

ಕಬೀರಾನಂದಾ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನರಹರಿ ಸೇವಾಪ್ರತಿಷ್ಠಾನದ ಮಾರ್ಗದರ್ಶಕ ಶ್ರೀ ಶಾಂತರಾಮ್ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net