ಜಾರಕಿಹೊಳಿ ಬ್ಲ್ಯಾಕ್​ಮೇಲ್​ ಆರೋಪಿಗಳಿಗೆ ಸಿಕ್ತು ನಿರೀಕ್ಷಣಾ ಜಾಮೀನು; ನರೇಶ್​, ಶ್ರವಣ್​ ಸದ್ಯ ನಿರಾಳ

naresh shravan
Published on

ಬೆಂಗಳೂರು: ಸಿಡಿ ಲೇಡಿ ಹಾಗೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ಬಹಿರಂಗವಾದ ಮೇಲೆ ಹೆಚ್ಚಾಗಿ ಕೇಳಿಬಂದಿದ್ದ ಇನ್ನೆರಡು ಹೆಸರುಗಳೆಂದರೆ ಬಿ.ಎಂ. ನರೇಶ್​ ಗೌಡ ಹಾಗೂ ಶ್ರವಣ್​. ಇವರಿಬ್ಬರು ಈ ಸಿಡಿ ಇಟ್ಟುಕೊಂಡು ರಮೇಶ್​ ಜಾರಕಿಹೊಳಿ ಅವರನ್ನು ಬ್ಲ್ಯಾಕ್​ಮೇಲ್​ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪವಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇವರಿಬ್ಬರೂ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದರು. ಕೊನೆಗೂ ಇವರಿಗೆ ಇಂದು ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ನರೇಶ್​ ಗೌಡ ಮತ್ತು ಶ್ರವಣ್​ ಇಬ್ಬರೂ ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಸಲುವಾಗಿ ಬ್ಲ್ಯಾಕ್​ಮೇಲ್​ಗೆ ಯತ್ನಿಸಿದ್ದರು ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ ಪೊಲೀಸರು ಇವರ ಶೋಧದಲ್ಲಿದ್ದರು. ಮತ್ತೊಂದೆಡೆ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ಇವರಿಬ್ಬರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇವರು ಸಲ್ಲಿಸಿದ್ದ ಜಾಮೀನು ಅರ್ಜಿ ಸಂಬಂಧ ಕಳೆದ ಬುಧವಾರ ವಿಚಾರಣೆ ನಡೆದಿದ್ದು, ಆರೋಪಿಗಳ ಪರವಾಗಿ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಿದ್ದರು. ಆದರೆ ಎಸ್​ಐಟಿ ಪರ ಹಿರಿಯ ವಕೀಲ ಕಿರಣ್​ ಜವಳಿ ಅವರು ಜಾಮೀನು ನೀಡದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ನ್ಯಾಯಾಧೀಶರಾದ ಲಕ್ಷ್ಮಿನಾರಾಯಣ್‌ ಭಟ್‌ ಅವರು ತೀರ್ಪು ಕಾಯ್ದಿರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net