

ಮಂಡ್ಯ: ಜಿಲ್ಲೆಯ ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಪಿಎಂಎನ್ ಪಕ್ಷ ನಿಷ್ಠೆ ಪರಿಗಣಿಸಿರುವ ಕಾಂಗ್ರೆಸ್ ಸರ್ಕಾರ, ನಾಮನಿರ್ದೇಶನ ಮಾಡಿ ಆದೇಶಿಸಿದೆ. ಆದರೆ ಇದೊಂದು ತಾತ್ಕಾಲಿಕ ಪರಿಹಾರವಷ್ಟೇ. ಅರ್ಹತೆಯಿದ್ದರೂ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪಿಎಂಎನ್ ಸೇರಿದಂತೆ ಬೆಂಬಲಿಗರಲ್ಲಿ ಅತೃಪ್ತಿ ಇದೆ.
ಕಳೆದ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಹೆಚ್ಚಿನ ಕೊಡುಗೆ ನೀಡಿದ ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಬಹುದೆನ್ನುವ ನಿರೀಕ್ಷೆ ಅಗಾಧವಾಗಿತ್ತು. ಅದರಂತೆ ಎನ್.ಚಲುವರಾಯಸ್ವಾಮಿ ಅವರೊಟ್ಟಿಗೆ ಪಿ.ಎಂ.ನರೇಂದ್ರಸ್ವಾಮಿ ಅವರಿಗೂ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ ಎನ್ನುವುದಿತ್ತು. ಆದರೆ ಅದ್ಯಾಕೋ ಕಾಂಗ್ರೆಸ್ ಹೈಕಮಾಂಡ್ ಪಿಎಂಎನ್ ಅವರನ್ನು ಕಡೆಗಣಿಸಿತ್ತು. ಮಾತ್ರವಲ್ಲದೆ ಈ ಪಕ್ಷದ ನಿರ್ಧಾರ ಆಶ್ಚರ್ಯಕ್ಕೂ ಕಾರಣವಾಗಿತ್ತು.
2018ರ ವಿಧಾನಸಭಾ ಚುನಾವಣೆ ಲಿತಾಂಶದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿತ್ತು. ಏಳು ಕ್ಷೇತ್ರದಲ್ಲಿಯೂ ಸೋಲುಂಡ ಪರಿಣಾಮ ಜಿಲ್ಲೆಯಲ್ಲಿ ಅಸ್ಥಿತ್ವಕ್ಕಾಗಿ ಪರಿತಪಿಸುವಂತಾಯಿತು. ಈ ವೇಳೆ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಸೇರಿ ಪಕ್ಷ ಸಂಘಟನೆಗೆ ಪಿಎಂಎನ್ ಸಜ್ಜಾದರು. ವಿಪಕ್ಷಗಳ ಟೀಕೆಗೆ ತಲೆಕೆಡಿಸಿಕೊಳ್ಳದೇ ತಮ್ಮ ಕಾರ್ಯಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಪರಿಣಾಮ ಎರಡು ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲುಣಿಸಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ತೋರಿತು. ಇದಾದ ಬಳಿಕ ‘ಕೈ’ ವರ್ಚಸ್ಸು ವೃದ್ಧಿಸಿತು.
2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಈ ವೇಳೆ ಚಲುವರಾಯಸ್ವಾಮಿಯೊಂದಿಗೆ ಜೋಡೆತ್ತಿನಂತೆ ಚುನಾವಣೆಯಲ್ಲಿ ನರೇಂದ್ರಸ್ವಾಮಿ ಶ್ರಮಿಸಿದರು. ಇದರಿಂದಾಗಿ ಬೆಂಬಲಿತ ಕ್ಷೇತ್ರವಾದ ಮೇಲುಕೋಟೆ ಸೇರಿದಂತೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಈ ಕಾರಣದಿಂದಾಗಿ ಜಿಲ್ಲೆಗೆ ಎರಡು ಸಚಿವ ಸ್ಥಾನವೆನ್ನುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಯಿತು. ಇಷ್ಟಾದರೂ ಎಲ್ಲಿಯೂ ಪಕ್ಷದ ಹೈಕಮಾಂಡ್ ಹಾಗೂ ನಾಯಕರ ವಿರುದ್ಧ ಬಹಿರಂಗವಾಗಿ ಮುನಿಸನ್ನು ಪಿಎಂಎನ್ ತೋರಲಿಲ್ಲ. ಮಾತ್ರವಲ್ಲದೆ ಎರಡು ಬಾರಿ ಕ್ಷೇತ್ರದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಜತೆಗೆ ಪಕ್ಷದ ಚಟುವಟಿಕೆಯಲ್ಲಿಯೂ ಹಿಂದೆ ಬೀಳಲಿಲ್ಲ. ಮುಖ್ಯವಾಗಿ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಮಾಡುವ ಟೀಕೆಗೆ ಅದರಲ್ಲಿಯೂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಬಗ್ಗೆ ಆರೋಪ ಕೇಳಿಬಂದಾಗ ನರೇಂದ್ರಸ್ವಾಮಿ ಅವರು ಪಕ್ಷ ಹಾಗೂ ನಾಯಕ ನಿಷ್ಠೆ ಮೆರೆದರು. ಪ್ರತಿಪಕ್ಷ ವಿರುದ್ಧ ಟೀಕಾಪ್ರಹಾರ ನಡೆಸಿ ತಮ್ಮ ಪಕ್ಷದ ಮೇಲಿನ ಅಭಿಮಾನ ತೋರ್ಪಡಿಸಿದರು.
ಅರ್ಹತೆ ಇದ್ದರೂ ಅವಕಾಶವಿಲ್ಲ
ಜಿಲ್ಲೆಯಲ್ಲಿ ಹಿರಿಯ ಶಾಸಕರಾಗಿದ್ದರೂ ನಿರೀಕ್ಷೆಯಂತೆ ಸಚಿವ ಸ್ಥಾನ ಸಿಗದಿರುವುದು ಸಾಮಾನ್ಯವಾಗಿ ಬೇಸರ ತರಿಸುತ್ತದೆ. ಈ ರೀತಿ ಅವಕಾಶ ವಂಚಿತರಾಗುತ್ತಿರುವುದು ಇದೇ ಮೊದಲೇನಲ್ಲ. 2013ರಲ್ಲಿ ಶಾಸಕರಾಗಿ ಆಯ್ಕೆಯಾದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಈ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮಳವಳ್ಳಿ ಕ್ಷೇತ್ರಕ್ಕೆ ಬಂದಾಗಲೆಲ್ಲ ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡಲಾಗದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದರು. ಈ ಬಾರಿಯೂ ಅದೇ ಬೇಸರ ಮುಂದುವರೆದಿದೆ. ಸಿಎಂ ಕ್ಷೇತ್ರಕ್ಕೆ ಬಂದಾಗಲೆಲ್ಲ ಪಿಎಂಎನ್ ಬೆಂಬಲಿಗರು ಸಚಿವ ಸ್ಥಾನದ ಬೇಡಿಕೆ ಪ್ರಸ್ತಾಪಿಸುತ್ತಲೇ ಇರುತ್ತಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಹೆಗ್ಗಳಿಕೆ ಪಿಎಂಎನ್ ಹೆಸರಿಗಿದೆ. ಇದಲ್ಲದೆ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರಿಗೆ ಅಧಿಕಾರ ಕೊಡಿಸುವಲ್ಲಿಯೂ ನರೇಂದ್ರಸ್ವಾಮಿ ಶ್ರಮಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹನ್ನೊಂದು ಕ್ಷೇತ್ರದ ಪೈಕಿ ಎಂಟರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಆದರೂ ಮುಖ್ಯಮಂತ್ರಿ ಜತೆಗೆ ಇಬ್ಬರಿಗೆ ಅಂದರೆ ಮಹದೇವಪ್ಪ ಹಾಗೂ ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದ ಪೈಕಿ ಬೆಂಬಲಿತ ಕ್ಷೇತ್ರ ಸೇರಿದಂತೆ ಆರರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಹೀಗಿದ್ದರೂ ಒಂದು ಸಚಿವ ಸ್ಥಾನ ನೀಡಲಾಗಿದೆ. ಈ ತಾರತಮ್ಯದ ವಿರುದ್ಧ ಅಸಮಾಧಾನ ಸರ್ಕಾರ ರಚನೆಯಾದ ದಿನದಿಂದಲೂ ಇದೆ. ಅದು ಮುಂದುವರೆದಂತೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಹಿರಿಯ ಶಾಸಕರಿಗೆ ಯಾವುದೇ ಅಧಿಕಾರ ನೀಡಿಲ್ಲವೆನ್ನುವ ಕೊರಗು ಬೆಂಬಲಿಗರಲ್ಲಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ನೀಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೊಂಚ ಸಮಾಧಾನ ಎನಿಸಿದರೂ ಅರ್ಹತೆಗೆ ತಕ್ಕಂತೆ ಸಚಿವ ಸ್ಥಾನ ನೀಡಲೆಬೇಕೆನ್ನುವುದು ಬೆಂಬಲಿಗರು ಹಾಗೂ ಅಹಿಂದ ವರ್ಗದ ಒತ್ತಾಯ.
ಕೂಲಿ ಕೇಳುತ್ತಿದ್ದೇನೆಂದಿದ್ದ ಪಿಎಂಎನ್
ಸಚಿವ ಸ್ಥಾನದ ಬಗ್ಗೆ ಹಲವು ಬಾರಿ ವಿಷಯ ಪ್ರಸ್ತಾಪವಾದ ವೇಳೆ ನಿಖರವಾದ ಸ್ಪಷ್ಟನೆ ನೀಡಿರುವ ನರೇಂದ್ರಸ್ವಾಮಿ, ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷ ವಹಿಸಿರುವ ಎಲ್ಲ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದೇನೆ. ಅದಕ್ಕೆ ತಕ್ಕಂತೆ ಕೂಲಿ ಕೇಳುತ್ತಿದ್ದೇನೆ. ಹಿರಿತನದ ಆಧಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದಿದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕೂಡ ಪಿಎಂಎನ್‌ಗೆ ಸಚಿವ ಸ್ಥಾನ ನೀಡಬೇಕೆನ್ನುವ ಒತ್ತಾಯಿಸುತ್ತಲೇ ಇದ್ದಾರೆ.
ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಹನಿ ನೀರಾವರಿ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಆದ್ಯತೆ ನೀಡುವ ಪಿಎಂಎನ್ ಅವರಿಗೆ ಪರಿಸರದ ಬಗ್ಗೆ ಅತೀವ ಕಾಳಜಿ ಇದೆ. ಇದಕ್ಕೆ ಪೂರಕವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿ ಒಲಿದುಬಂದಿದ್ದು, ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸುವ ನಿರೀಕ್ಷೆ ಇದೆ.