ಸಾಧನೆಗಳ ಪಟ್ಟಿ ತೆರೆದಿಟ್ಟ ಮೋದಿ: ಕಾಂಗ್ರೆಸ್ ಟೀಕೆಗಳಿಗೆ ನೇರ ಉತ್ತರ ನೀಡಿದ ಪ್ರಧಾನಿ

Mdr_01..
Published on

ಮದ್ದೂರು: ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನೆ ಹಾಕುವ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆಯ ಪಟ್ಟಿ ಮಂಡಿಸುವ ಮೂಲಕ ಉತ್ತರ ಕೊಟ್ಟರು.

ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ 12 ಸಾವಿರ ಕೋಟಿ ರೂ. ಮೊತ್ತದ 210 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಸೇವೆಗೆ ಸಮರ್ಪಣೆ ಮತ್ತು ಮೈಸೂರು-ಕುಶಾಲನಗರ ಮಾರ್ಗದ ಹೆದ್ದಾರಿ ನಿರ್ಮಾಣಕ್ಕೆ ಶಿಲನ್ಯಾಸ ಸಮಾರಂಭದಲ್ಲಿ ಸಹಸ್ರಾರು ಜನರನ್ನುದ್ದೇಶಿಸಿ ಮಾತನಾಡುತ್ತಲೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಡಬಲ್ ಇಂಜಿನ್ ಸರ್ಕಾರದ ಸಾಧನೆ ಏನೆಂದು ಕಾಂಗ್ರೆಸ್ ಪ್ರಶ್ನೆ ಹಾಕುತ್ತದೆ. 9 ವರ್ಷಗಳಲ್ಲಿ 9 ಕೋಟಿ ಬಡವರಿಗೆ ಮನೆ ಕೊಟ್ಟಿದೆ. ರಾಜ್ಯದಲ್ಲೂ ಲಕ್ಷಾಂತರ ಮನೆ ನೀಡಿದೆ. 40 ಲಕ್ಷ ಹೊಸ ಕುಟುಂಬಗಳ ಮನೆಗೆ ನಲ್ಲಿ ಸಂಪರ್ಕದ ಮೂಲಕ ನೀರು ತಲುಪಿಸಿದೆ ಎಂದು ಅಂಕಿ ಅಂಶಗಳೊಂದಿಗೆ ತಿರುಗೇಟು ನೀಡಿದರು.

ಕೃಷಿಕರ ಚಿಕ್ಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 12 ಸಾವಿರ ಕೋಟಿ ರೂ. ಜಮಾ ಆಗಿದೆ. ಮಂಡ್ಯ ಜಿಲ್ಲೆಯಲ್ಲೂ 3.25 ಲಕ್ಷ ರೈತರಿಗೆ 600 ಕೋಟಿ ರೂ. ನೀಡಲಾಗಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ. ಕೊಟ್ಟರೆ, ಇದಕ್ಕೆ ರಾಜ್ಯ ಸರ್ಕಾರ 4 ಸಾವಿರ ರೂ. ಸೇರಿಸಿ ನೀಡಿದೆ. ಡಬಲ್ ಇಂಜಿನ್ ಸರ್ಕಾರದಿಂದ ರೈತರಿಗೂ ಡಬಲ್ ಲಾಭ ದೊರೆತಿದೆ ಎಂದರು.

ದೇಶದಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಹರಿದುಬಂದಿದೆ. ಇದರಲ್ಲಿ ಕರ್ನಾಟಕಕ್ಕೆ ದೊಡ್ಡ ಪ್ರಯೋಜನ ಸಿಕ್ಕಿದೆ. ಕರೊನಾ ಸಂಕಷ್ಟದಲ್ಲೂ ಕರ್ನಾಟಕಕ್ಕೆ 4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ಪರಿಶ್ರಮಕ್ಕೆ ಸಾಕ್ಷಿ ಎಂದು ಮೋದಿ ನುಡಿದರು.

ದೇಶದಲ್ಲಿ ದಶಕಗಳಿಂದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದವು. ಇದಕ್ಕೆ ವೇಗ ನೀಡುವ ದೃಷ್ಟಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಲಾಗಿದೆ. ರಾಜ್ಯದ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲು ಸಂಕಲ್ಪ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net