ವಿದ್ಯುತ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ

29mdkj6 - Copy
Published on

ಮಡಿಕೇರಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ’ಉಜ್ವಲ ಭಾರತ, ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ಫಲಾನುಭಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

೨೦೧೪ ರವರೆಗೆ ೨.೪೮ ಲಕ್ಷ ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಕಳೆದ ೮ ವರ್ಷ ಅವಧಿಯಲ್ಲಿ ೪ ಲಕ್ಷ ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಿ, ೧.೮೫ ಲಕ್ಷ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದು ಸರ್ಕಾರದ ಮಹತ್ತರ ಸಾಧನೆಯಾಗಿದೆ ಎಂದರು.

ಪಂಡಿತ ದೀನಾ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಶ್ರಮಿಸಿದೆ. ಹೊಸ ಕಂಬ, ಟ್ರಾನ್‌ಫಾರ್ಮರ್ ಅಳವಡಿಸಿ ವಿದ್ಯುತ್ ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ. ಒಂದು ರಾಷ್ಟ, ಒಂದೇ ಜಾಲ ಯೋಜನೆಯಡಿ ಇಡೀ ದೇಶದಲ್ಲಿ ೧.೬೩ ಲಕ್ಷಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕ ಸ್ಥಾಪಿಸಿ, ಪ್ರತೀ ಕುಟುಂಬಕ್ಕೂ ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಸ್ವಾಭಾವಿಕವಾಗಿ ದೊರೆಯುವ ಸೋಲಾರ್ ವಿದ್ಯುತ್ ಸಂಪರ್ಕಕ್ಕೂ ಉತ್ತೇಜನ ನೀಡಲಾಗಿದೆ. ಜಲ ವಿದ್ಯುತ್ ಮತ್ತು ಕಿರು ವಿದ್ಯುತ್ ಯೋಜನೆಯು ಸಹ ಬಳಸಿಕೊಳ್ಳಲಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಸಹ ಬಳಸಿ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಶ್ರೀಮಂಗಲ, ಹಾನಗಲ್ಲು ಶೆಟ್ಟಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದೆ. ಸಿದ್ಧಾಪುರ, ಮೂರ್ನಾಡಿನಲ್ಲಿ ಕಾಮಗಾರಿ ಆರಂಭವಾಗಬೇಕಿದೆ. ಹೊಸದಾಗಿ ಬಾಳೆಲೆ, ಹುದಿಕೇರಿ, ಕಳತ್ಮಾಡು, ಕೋಪಟ್ಟಿ, ಮಾದಾಪುರ, ಕೂಡಿಗೆ, ಕೊಡ್ಲಿಪೇಟೆ, ಸಂಪಾಜೆಗಳಲ್ಲಿ ಹೊಸದಾಗಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಬೇಕಿದೆ ಎಂದರು.

ಬೆಳಕು ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಕಲ್ಪಿಸಲಾಗುತ್ತದೆ. ಮಡಿಕೇರಿಯಿಂದ ರಾಜಪೇಟೆಗೆ ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗಕ್ಕೂ ಕ್ರಮ ವಹಿಸಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತ ಜೊತೆ ಕೈಜೋಡಿಸಿದ್ದಲ್ಲಿ, ವಿದ್ಯುತ್ ಸಮರ್ಪಕ ಪೂರೈಕೆಗೆ ಮುಂದಾಗಬಹುದೆಂದು ಕೆ.ಜಿ. ಬೋಪಯ್ಯ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ವಿದ್ಯುತ್ ಇಲ್ಲದ ಬದುಕನ್ನು ಊಸಿಕೊಳ್ಳುವುದು ಅಸಾಧ್ಯ. ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಒದಗಿಸುವುದು ಅತ್ಯವಶ್ಯ. ಆ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಕಾರ್ಯನಿರ್ವಸುತ್ತಿದೆ ಎಂದರು.

ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಬಹಳಷ್ಟು ಕೆಲಸ ನಡೆಯುತ್ತಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಜಿಲ್ಲೆಯಲ್ಲಿ ಜೂನಿಯರ್ ಲೈನ್‌ಮೆನ್ ನೇಮಕ ಮಾಡಬೇಕು. ಇದರಿಂದ ಜಿಲ್ಲೆಯಲ್ಲಿಯೇ ಕೆಲಸ ನಿರ್ವಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ಶೇ.೧೦೦ ರಷ್ಟು ವಿದ್ಯುತ್ ಬಿಲ್ಲು ಪಾವತಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ೧೦ ಎಚ್‌ಪಿವರೆಗೆ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿರುವುದು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನಗೊಂಡಿತು. ಸೆಸ್ಕ್ ಇಇ ಅನಿತಾ ಬಾಯಿ, ಎಇಇ ವಿನಯ ಕುಮಾರ್ ಮತ್ತಿತರರು ಇದ್ದರು. ಉಮೇಶ್ ಚಂದ್ರ ಸ್ವಾಗತಿಸಿದರು. ಇ.ರಾಜು ಮತ್ತು ತಂಡದವರು ವಿದ್ಯುತ್ ಜಾಗೃತಿ ಗೀತೆ ಹಾಡಿದರು. ಚಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net