

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ವಲಯ ಸಾಮಾಜಿಕ ಅರಣ್ಯ ವಿಭಾಗದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿರುವ ಗಿಡ ನೆಡುವ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಹಳ್ಳ ಹಿಡಿಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಅರಣ್ಯ ಬೆಳೆಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಸಾಮಾಜಿಕ ಅರಣ್ಯ ವಿಭಾಗದಿಂದಲೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟ ಗಿಡಗಳನ್ನು ಮರಗಳಾಗಿ ಬೆಳೆಸುವ ಮಹತ್ವಾಕಾಂಕ್ಷ್ಯ ನರೇಗಾ ಯೋಜನೆಯ ಮೂಲಕ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಆರಂಭವಾಗಿದೆ. ಆದರೆ, ಹಲವೆಡೆ ಅವೈಜ್ಞಾನಿಕ ಹಾಗೂ ಅಸಡ್ಡೆಯಿಂದ ಈ ಕಾರ್ಯ ನಡೆಯುತ್ತಿರುವುದು ಕಂಡು ಬಂದಿದೆ.
ಏನಿದು ಯೋಜನೆ: ರಸ್ತೆ, ಸ್ಮಶಾನ, ಗುಂಡುತೋಪು, ಶಾಲೆ, ಆಸ್ಪತ್ರೆ ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು ಯೋಜನೆಯ ಉದ್ದೇಶ. ಸಾಮಾಜಿಕ ಅರಣ್ಯ ಇಲಾಖೆಯು ಒಂದು ಗಿಡ ನೆಡಲು ನರೇಗಾ ಯೋಜನೆಯ ಮೂಲಕ 372 ರೂ. ಕೂಲಿ ನೀಡುತ್ತಿದೆ. ಗಿಡಗಳನ್ನು ಇಲಾಖೆ ವತಿಯಿಂದಲೇ ವಿತರಿಸಲಾಗುತ್ತಿದೆ. ಗುಂಡಿ ತೆಗೆದು ನೆಡಲು ಕೂಲಿ ಕೊಡುತ್ತದೆ. ಇನ್ನು ಈ ಗಿಡಕ್ಕೆ ಕಡ್ಡಿ, ಮುಳ್ಳು, ನೀರು ಸೇರಿ ಅದರ ನಿರ್ವಹಣೆ ಜವಾಬ್ದಾರಿ ಇಲಾಖೆಯದ್ದೇ ಆಗಿರುತ್ತದೆ. ಈ ಯೋಜನೆಯಡಿ ಗ್ರಾಪಂಗಳಲ್ಲಿ ಒಂದರಿಂದ ಐದು ಸಾವಿರದವರೆಗೆ ಗಿಡ ನೆಡಬಹುದಾಗಿದೆ.
ವಿವಿಧ ಗ್ರಾಪಂಗಳಲ್ಲಿ ಕಾರ್ಯಕ್ರಮ: ಚನ್ನಪಟ್ಟಣ ಸಾಮಾಜಿಕ ಅರಣ್ಯ ವಲಯದಿಂದ ತಾಲೂಕಿನ ಮಳೂರು ಪಟ್ಟಣ, ಕೂಡ್ಲೂರು, ಬಿ.ವಿ. ಹಳ್ಳಿ, ಚಕ್ಕೆರೆ ಸೇರಿ ಹಲವು ಗ್ರಾಪಂಗಳಲ್ಲಿ ಗಿಡ ನೆಡುವ ಕಾರ್ಯ ಆರಂಭವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ಪರಿಸರ ಮೂಡಿಸುವ ಜತೆಗೆ ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಮಹತ್ವಾಕಾಂಕ್ಷ್ಯ ಯೋಜನೆ ಹಳ್ಳ ಹಿಡಿಯುತ್ತಿದೆ.
ವಿದ್ಯುತ್ ಮಾರ್ಗದ ಕೆಳಗೆ ಗಿಡ: ವಿದ್ಯುತ್ ತಂತಿಗಳು ಹಾದುಹೋಗಿರುವ ಮಾರ್ಗ ಇರುವೆಡೆಗಳಲ್ಲಿ ಮರ, ಗಿಡಗಳನ್ನು ಕಡಿಯಲು ಬೆಸ್ಕಾಂ ಸಾಕಷ್ಟು ಹಣ ವ್ಯಯಿಸುತ್ತಿದೆ. ಈ ಮಧ್ಯೆ ವಿದ್ಯುತ್ ಮಾರ್ಗದ ಕೆಳಗೆ ಗಿಡಗಳನ್ನು ನೆಡಲು ಗುಂಡಿ ತೆಗೆಯಲಾಗಿದೆ. ಇದನ್ನು ಗಮನಿಸಿದಾಗ ಈ ಯೋಜನೆ ಕಾಟಾಚಾರಕ್ಕಾಗಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ತಾಲೂಕಿನ ಕೂಡ್ಲೂರು ಕೆರೆ ಏರಿ ಮೇಲೆ ವಿದ್ಯುತ್ ಮಾರ್ಗದ ಕೆಳಗಡೆ ಗಿಡ ನೆಡಲು ಗುಂಡಿಗಳನ್ನು ತೆಗೆಯಲಾಗಿದೆ. ಇದೇ ರೀತಿಯಾಗಿ ಹಲವೆಡೆ ಅವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತಿದೆ. ವಿದ್ಯುತ್ ಮಾರ್ಗದ ಕೆಳಗೆ ಗಿಡ ನೆಡಲು ಹಣ ಕೊಟ್ಟು, ಅವನ್ನು ಕಡಿಯಲು ಸರ್ಕಾರದ ಹಣ ಪೋಲು ಆಗಬೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಗಿಡ ನೆಟ್ಟು ಫೋಟೋಗೆ ಫೋಸ್: ಕೆಲವೆಡೆ ಬೇಕಾಬಿಟ್ಟಿ ಹಾಗೂ ಅಸಡ್ಡೆಯಿಂದ ಗಿಡ ನೆಡಲಾಗುತ್ತಿದೆ. ಶಾಸಕ್ಕೆ ಗಿಡನೆಟ್ಟು ಫೋಟೋ ತೆಗೆದು ಕಡತಕ್ಕೆ ಸೇರಿಸಲಾಗುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಗುರಿಸಾಧನೆ ದೃಷ್ಟಿ ಇಟ್ಟಿರುವ ಕಾರಣ ಕಾರ್ಯಕ್ರಮದ ಪ್ರಗತಿ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿಲ್ಲ. ಗಿಡ ನೆಡುವ ಜವಾಬ್ದಾರಿ ಪಡೆದಿರುವವರು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಿ, ಸರ್ಕಾರದ ಹಣ ನೀರಿನಲ್ಲಿ ಹೋಮ ಆಗದಂತೆ ತಡೆಯಬೇಕು ಎಂಬುದು ಪರಿಸರಪ್ರಿಯರ ಆಗ್ರಹವಾಗಿದೆ.
ಹಲವು ಗ್ರಾಪಂಗಳಲ್ಲಿ ಗಿಡ ನೆಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ನಿಗಾವಹಿಸಿದ್ದೇವೆ. ವಿದ್ಯುತ್ ಮಾರ್ಗಗಳ ಕೆಳಗೆ ಹೊಂಗೆ ಗಿಡ ನೆಡಲು ಯೋಜಿಸಲಾಗಿದೆ.
ಧನ್ಯಶ್ರೀ, ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣಾಧಿಕಾರಿ